ದೊಡ್ಡಬಳ್ಳಾಪುರ: ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಎಕ್ಸ್ಪ್ರೆಸ್ ರೈಲಿಗೆ ಸಿಲುಕಿ ಮಹಿಳೆ ಹಾಗೂ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಸಮೀಪ ಸೋಮವಾರ ಮುಂಜಾನೆ ಸಂಭವಿಸಿದೆ.
ಮೃತರನ್ನು ಇರ್ಫಾನಾ (52) ಹಾಗೂ ಮೊಮ್ಮಕ್ಕಳಾದ ರುಕಿಯಾ (13) ಮತ್ತು ರಾಕಿಯಾ (08) ಎಂದು ಗುರುತಿಸಲಾಗಿದೆ. ಲಭ್ಯ ಮಾಹಿತಿ ಪ್ರಕಾರ, ಮೃತರು ಮುತ್ತೂರು ಕಡೆಯಿಂದ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಬರುತ್ತಿದ್ದ ವೇಳೆ ಘಟನೆ ಜರುಗಿದೆ.
ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಬರುತ್ತಿದ್ದರು. ಎರಡು ಹಳಿಗಳಿದ್ದು, ತಿರುವಿನಲ್ಲಿ ರೈಲು ಬರುತ್ತಿರುವುದು ಗಮನಕ್ಕೆ ಬಂದಿಲ್ಲ. ವೇಗವಾಗಿ ಬಂದ ಎಕ್ಸ್ಪ್ರೆಸ್ ರೈಲು ಮೂವರ ಮೇಲೆ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ರಜೆ ಇದ್ದ ಹಿನ್ನೆಲೆಯಲ್ಲಿ, ಮೊಮ್ಮಕ್ಕಳು ಹಿಂದೂಪುರದಿಂದ ಅಜ್ಜಿಯ ಮನೆಯಾದ ಮುತ್ತೂರಿಗೆ ಬಂದಿದ್ದರು. ಬೆಳಗ್ಗೆ ಹಿಂದೂಪುರಕ್ಕೆ ಹೋಗಲು ಅಜ್ಜಿಯ ಜೊತೆ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ,
ಬೇಗ ಬೇಗ ಮನೆಗೆ ಸೇರಿ ಶಾಲೆಗೆ ಹೋಗ್ಬೇಕು ಅನ್ನೋ ಅವಸರದಲ್ಲೇ ರೈಲು ಹಳಿ ದಾಟುತ್ತಿದ್ದ ಅಜ್ಜಿ ಮೊಮ್ಮಕ್ಕಳಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದಿದ್ದು, ಮೂವರ ದೇಹ ದಿಕ್ಕಾಪಾಲಾಗಿ ಬಿದ್ದಿದೆ. ದೊಡ್ಡಬಳ್ಳಾಪುರ ನಗರದ ರೈಲ್ವೆ ಸ್ಟೇಷನ್ನಲ್ಲಿ ಈ ಘಟನೆ ನಡೆದಿದೆ.