ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2026-27 ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. 7 ಮಹತ್ವದ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಕೇಂದ್ರ ಸಚಿವರು ಘೋಷಣೆ ಮಾಡಿದ್ದು, ಅದರಲ್ಲಿ ಬೆಂಗಳೂರನ್ನು ಸಂಪರ್ಕಿಸುವ ಎರಡು ಯೋಜನೆ ಘೋಷಣೆಯಾಗಿದೆ. ಮುಂಬೈ–ಪುಣೆ, ಹೈದರಾಬಾದ್–ಬೆಂಗಳೂರು, ದೆಹಲಿ–ವಾರಣಾಸಿ, ವಾರಣಾಸಿ–ಸಿಲಿಗುರಿ, ಪುಣೆ–ಹೈದರಾಬಾದ್, ಹೈದರಾಬಾದ್–ಚೆನ್ನೈ, ಚೆನ್ನೈ–ಬೆಂಗಳೂರು ಘೋಷಣೆಯಾಗಿರುವ ಹೈಸ್ಪೀಡ್ ರೈಲು ಮಾರ್ಗಗಳಾಗಿದ್ದು, ಈ ಮಾರ್ಗಗಳು ಪ್ರಮುಖ ಮೆಟ್ರೋಪಾಲಿಟನ್ ನಗರಗಳನ್ನು ವೇಗವಾಗಿ ಬೆಳೆಯುತ್ತಿರುವ ನಗರ ಮತ್ತು ಕೈಗಾರಿಕಾ ಕೇಂದ್ರಗಳೊಂದಿಗೆ ಸಂಪರ್ಕಿಸಲಿವೆ. ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯವಾಗಿದೆ, ಆದಾಯ ತೆರಿಗೆ ಹಾಗೂ ಕೈಗಾರಿಕಾ ವಲಯದಲ್ಲಿ ಕೆಲ ಸಾಮಾನ್ಯ ಘೋಷಣೆಗಳಿದ್ದರೂ, ರಾಜ್ಯದ ಅಭಿವೃದ್ಧಿಗೆ ನೇರವಾಗಿ ಸಹಾಯ ಮಾಡುವ ಯೋಜನೆಗಳಿಲ್ಲ ಎಂದು ಅವರು ಹೇಳಿದ್ದಾರೆ. ಈ ಬಜೆಟ್‌ನಿಂದ ನಮ್ಮ ರಾಜ್ಯಕ್ಕೆ ಯಾವುದೇ ಪ್ರಮುಖ ಪಾಲು ಸಿಗುವುದಿಲ್ಲ. ಕೇಂದ್ರ ಬಜೆಟ್‌ನಿಂದ ಬೆಂಗಳೂರಿಗೆ ನಿರೀಕ್ಷೆಗಳಿದ್ದವು. ಪ್ರಧಾನಿ ನರೇಂದ್ರ ಮೋದಿ ಇದನ್ನು 'ಜಾಗತಿಕ ನಗರ' ಎಂದು ಕರೆದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಅದಕ್ಕಾಗಿ ಏನು ಮಾಡಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
16ನೇ ಹಣಕಾಸು ಆಯೋಗಕ್ಕೆ ಒಪ್ಪಿಗೆ ನೀಡಿರುವ ಕೇಂದ್ರ ಸರ್ಕಾರ, 2026–27ನೇ ಹಣಕಾಸು ವರ್ಷಕ್ಕೆ ರಾಜ್ಯಗಳಿಗೆ 1.4 ಲಕ್ಷ ರೂ.ಕೋಟಿ ಅನುದಾನ ನೀಡುವುದಾಗಿ ಘೋಷಣೆ ಮಾಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಆಯೋಗದ ಶಿಫಾರಸುಗಳನ್ನು ಸರ್ಕಾರ ಒಪ್ಪಿಕೊಂಡಿದ್ದು, ರಾಜ್ಯಗಳಿಗೆ ಒಟ್ಟು 1.4 ಲಕ್ಷ ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ 16ನೇ ಹಣಕಾಸು ಆಯೋಗ ತನ್ನ ಸಮಗ್ರ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತ್ತು. ಆಯೋಗ ನೀಡಿದ್ದ ಸಲಹೆ ಮತ್ತು ಶಿಫಾರಸುಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಅವುಗಳನ್ನು ಅಧಿಕೃತವಾಗಿ ಅಂಗೀಕರಿಸಿದೆ. ಇದರ ಅನ್ವಯ, ರಾಜ್ಯಗಳಿಗೆ ಹೆಚ್ಚಿನ ಆರ್ಥಿಕ ನೆರವು ಸಿಗಲಿದೆ. ಇದು ರಾಜ್ಯ ಸರ್ಕಾರಗಳು ತಮ್ಮ ಬಜೆಟ್ ಯೋಜನೆಗಳನ್ನು ರೂಪಿಸಲು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ದೊಡ್ಡ ಶಕ್ತಿ ತುಂಬಲಿದೆ.
ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಮತ್ತು ಸಂಸ್ಥಾಪಕ ಸಿಜೆ ರಾಯ್ ಅವರ ಅಂತ್ಯಕ್ರಿಯೆ ಇಂದು ಬನ್ನೇರುಘಟ್ಟದ ಕಾಸಾಗ್ರ್ಯಾಂಡ್ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ನಡೆಯಿತು. ಅಂತ್ಯಕ್ರಿಯೆಗೆ ಮುನ್ನ ಬನ್ನೇರುಘಟ್ಟದಲ್ಲಿರುವ ಕಾಸಾಗ್ರಾಂಡ್‌ನಲ್ಲಿ ಮಧ್ಯಾಹ್ನ 2 ಗಂಟೆಯವರೆಗೂ ರಾಯ್ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯಿಂದ ತೀವ್ರ ನೊಂದಿದ್ದ ಸಿಜೆ ರಾವ್ ಜ.30ರಂದು ಕಾನ್ಫಿಡೆಂಟ್ ಗ್ರೂಪ್ ಕಂಪನಿ ಕಚೇರಿಯಲ್ಲಿ ತಮ್ಮ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಸಿಜೆ ರಾಯ್ ಆತ್ಮಹತ್ಯೆ ಬೆನ್ನಲ್ಲೇ ಉದ್ಯಮಿಗಳು ಐಟಿ ದಾಳಿ ವಿರುದ್ಧ ತಿರುಗಿ ಬಿದ್ದಿದ್ದು, ಆಕ್ರೋಶ ಹೊರಹಾಕಿದ್ದಾರೆ. ಖ್ಯಾತ ಉದ್ಯಮಿ ಮೋಹನ್ ದಾಸ್ ಪೈ ಸಿಜೆ ರಾಯ್ ಕೇಸ್ ಬಗ್ಗೆ ಟ್ವೀಟ್ ಮಾಡಿದ್ದು, ದಯವಿಟ್ಟು ಸಿಜೆ ರಾಯ್ ಪ್ರಕರಣದ ಬಗ್ಗೆ ಪಾರದರ್ಶಕವಾಗಿ ತನಿಖೆ ಮಾಡಲು ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಮನವಿ ಮಾಡಿದ್ದಾರೆ. ಸಿದ್ಧಾರ್ಥ್‌ರನ್ನು ನಾವು ಕಳೆದುಕೊಂಡಿದ್ದೇವೆ. ಐಟಿ ಅಧಿಕಾರಿಗಳ ಟಾರ್ಚರ್ ಗೆ ಅನೇಕರು ಸಮಸ್ಯೆಗೆ ಒಳಗಾಗಿದ್ದಾರೆ. ದಯವಿಟ್ಟು ತೆರಿಗೆ ಪಾವತಿದಾರರನ್ನು ಈ ರೀತಿಯ ದಾಳಿಗಳು ಮತ್ತು ನಾಗರಿಕ ಹಕ್ಕುಗಳ ಮೇಲಿನ ದಾಳಿಯಿಂದ ರಕ್ಷಿಸುವಂತೆ ವಿನಂತಿಸಿದ್ದಾರೆ. ನಮ್ಮ ವಿತ್ತ ಸಚಿವರು ಇಂತಹ ಅಧಿಕಾರಿಗಳಿಗೆ ಹೆಚ್ಚು ಅಧಿಕಾರ ನೀಡ್ತಿದ್ದಾರೆ. ತಪ್ಪು ದಾಳಿಗೆ ಅಧಿಕಾರಿಗಳಿಗೆ ಶಿಕ್ಷೆಯಾಗಿದೆಯೇ? ಕಳೆದ 3 ವರ್ಷಗಳಲ್ಲಿ ನೇರ ತೆರಿಗೆಗಳ ಮೂಲಕ 72 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆಯೇ? ಇಂತಹ ದಾಳಿಗಳ ಮೂಲಕ ಎಷ್ಟು ಸಂಗ್ರಹಿಸಲಾಗಿದೆ? ಎಂದು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ದ್ವೇಷ ಭಾಷಣ’ ವಿಧೇಯಕಕ್ಕೆ ಅಂಗೀಕಾರ ಹಾಕುವುದಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಿರಾಕರಿಸಿದ್ದಾರೆ. ಮಸೂದೆಯ ಸಂವಿಧಾನಬದ್ಧತೆ, ಕಾನೂನು ವ್ಯಾಪ್ತಿ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅದರ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಈ ಕುರಿತು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಸಮಾಜದಲ್ಲಿ ದ್ವೇಷ ಭಾಷಣ ಹಾನಿಕಾರಕವಾದರೂ, ಅದನ್ನು ತಡೆಯುವ ಹೆಸರಿನಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನು ಹರಣ ಮಾಡುವುದು ಸೂಕ್ತವಲ್ಲ. ದ್ವೇಷಕ್ಕೆ ಉತ್ತರವಾಗಿ ದಮನಕಾರಿ ಕಾನೂನುಗಳ ಬದಲು ಶಿಕ್ಷಣ, ಸಂಸ್ಕೃತಿ ಮತ್ತು ಜಾಗೃತಿಯೇ ಪರಿಣಾಮಕಾರಿ ಮಾರ್ಗವಾಗಬೇಕು ಎಂದು ತಿಳಿಸಿದ್ದಾರೆ.