ಉತ್ಪಾದನೋತ್ತರ ಕೃಷಿ - ರೈತರ ಸಬಲೀಕರಣ ಅಂತರರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟನೆ 
ರಾಜ್ಯ

ಭಾರತ ಅಕ್ಕಿ ಉತ್ಪಾದನೆಯಲ್ಲಿ ಚೀನಾ ಮೀರಿಸಿದರೂ ರೈತರು ಕಷ್ಟದಲ್ಲೇ ಇದ್ದಾರೆ, ಕರ್ನಾಟಕದಲ್ಲಿ ಕೊಯ್ಲೋತ್ತರ ಮಾದರಿ ಜಾರಿಗೆ ಆದ್ಯತೆ: ಸಚಿವ ಚೆಲುವರಾಯಸ್ವಾಮಿ

ಭಾರತ ಪ್ರಸ್ತುತ 140 ಲಕ್ಷದಿಂದ 160 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ಉತ್ಪಾದಿಸುತ್ತಿದ್ದು, ಜಾಗತಿಕ ಅಕ್ಕಿ ರಫ್ತು ಕ್ಷೇತ್ರದಲ್ಲಿ ನಾಯಕತ್ವ ಪಡೆದಿದೆ. ದಾಖಲೆ ಮಟ್ಟದಲ್ಲಿ ಅಕ್ಕಿ ಉತ್ಪಾದನೆಯಾಗುತ್ತಿದ್ದರೂ ರೈತರ ಜೀವನಮಟ್ಟ ಮಾತ್ರ ಸುಧಾರಣೆ ಆಗಿಲ್ಲ ಎಂದು ಹೇಳಿದರು.

ಬೆಂಗಳೂರು: ಭಾರತ ದೇಶವು ಚೀನಾವನ್ನು ಮೀರಿಸಿ ವಿಶ್ವದ ಅತಿದೊಡ್ಡ ಅಕ್ಕಿ ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದರೂ, ದೇಶಾದ್ಯಂತ ಹಲವು ರೈತರು ಸಾಲದ ಸಂಕಷ್ಟದಲ್ಲಿ ಬಳಲುತ್ತಿದ್ದಾರೆ. ರೈತರ ಆದಾಯ ಅಸ್ಥಿರತೆಯಿಂದ ಕೂಡಿದ್ದು, ಕೊಯ್ಲೋತ್ತರ ನಷ್ಟಗಳಂತಹ ಸಮಸ್ಯೆಗಳನ್ನು ಇನ್ನೂ ಎದುರಿಸುತ್ತಿದ್ದಾರೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ಕೃಷಿ ವ್ಯಾಪಾರ ಮೇಳದ ಪೂರ್ವಭಾವಿ ಸಮ್ಮೇಳನವನ್ನು ಇಂದು ಬೆಂಗಳೂರಿನಲ್ಲಿ ಉದ್ದೇಶಿಸಿ ಮಾತನಾಡಿದ ಸಚಿವರು, ಭಾರತ ಪ್ರಸ್ತುತ 140 ಲಕ್ಷದಿಂದ 160 ಲಕ್ಷ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ಉತ್ಪಾದಿಸುತ್ತಿದ್ದು, ಜಾಗತಿಕ ಅಕ್ಕಿ ರಫ್ತು ಕ್ಷೇತ್ರದಲ್ಲಿ ನಾಯಕತ್ವ ಪಡೆದಿದೆ. ದಾಖಲೆ ಮಟ್ಟದಲ್ಲಿ ಅಕ್ಕಿ ಉತ್ಪಾದನೆಯಾಗುತ್ತಿದ್ದರೂ ರೈತರ ಜೀವನಮಟ್ಟ ಮಾತ್ರ ಸುಧಾರಣೆ ಆಗಿಲ್ಲ ಎಂದು ಹೇಳಿದರು.

ಇಂದು ಆಯೋಜಿಸಲಾದ ಎರಡು ದಿನಗಳ ಸಮ್ಮೇಳನಕ್ಕೆ “ ಉತ್ಪಾದನೆಯಿಂದಾಚೆಗೆ ಕೃಷಿ – ರೈತರ ಸಮೃದ್ಧಿಗೆ ಸ್ಥಿರ ಪರಿಸರ ವ್ಯವಸ್ಥೆಗಳ ನಿರ್ಮಾಣ (AgriBeyond 2026)” ಎಂಬ ಶೀರ್ಷಿಕೆಯನ್ನು ಇಡಲಾಗಿದೆ.

ಈ ಸಮ್ಮೇಳನವನ್ನು ಕರ್ನಾಟಕ ಸರ್ಕಾರದ ಕೃಷಿ ಇಲಾಖೆ ಆಯೋಜಿಸಿದ್ದು, ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ (MoA&FW) ಹಾಗೂ ಜರ್ಮನಿಯ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಚಿವಾಲಯ (BMZ)ಗಳ ದ್ವೈಪಕ್ಷಿಕ ಸಹಕಾರದಡಿ, ಭಾರತದಲ್ಲಿ ಕೃಷಿ ಪರಿಸರ ಪರಿವರ್ತನೆ ಪ್ರಕ್ರಿಯೆಗಳು (SuATI) ಯೋಜನೆ,(SuATI) ಮೂಲಕ ಜರ್ಮನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (GIZ) ಜಾರಿಗೊಳಿಸುತ್ತಿದೆ.

ಅಕ್ಕಿ ಸೇರಿದಂತೆ ಹಲವು ಕೃಷಿ ಬೆಳೆಗಳ ಉತ್ಪಾದನೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದ್ದರೂ ರೈತರು ಇನ್ನೂ ಸಾಲದ ಸುಳಿಯಲ್ಲಿ ಸಿಲುಕಿ ಬಳಲುತ್ತಿದ್ದಾರೆ. ಬೆಳೆ ಅಪಾಯಗಳು ಹಾಗೂ ಕುಟುಂಬದ ಜವಾಬ್ದಾರಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದ ರೈತರು ಉತ್ಪಾದನೆ ಮಾಡಿದರಷ್ಟೇ ಸಾಕಾಗುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.

ರೈತರ ಆದಾಯವನ್ನು ಹೆಚ್ಚಿಸಿ ಅವರನ್ನು ಉದ್ಯಮಿಗಳನ್ನಾಗಿಸಲು ಕರ್ನಾಟಕ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ಕೊಯ್ಲೋತ್ತರ ಹಾಗೂ ಮೌಲ್ಯವರ್ಧನೆ ಮಾದರಿಯನ್ನು ಜಾರಿಗೆ ತರಲು ಮುಂದಾಗಿದೆ ಎಂದರು.

ಉದ್ಯೋಗ ಹುಡುಕುತ್ತಿರುವ ವಿದ್ಯಾವಂತ ಯುವಸಮೂಹಕ್ಕೆ ಅವಕಾಶ ಒದಗಿಸಿ, ಸಮಗ್ರ ಹಾಗೂ ಪ್ರಗತಿಶೀಲ ಕೃಷಿಯನ್ನು ಸ್ಥಿರ ಜೀವನೋಪಾಯವಾಗಿ ರೂಪಿಸುವ ಗುರಿಯನ್ನು ಕೊಯ್ಲೋತ್ತರ ಮತ್ತು ಮೌಲ್ಯವರ್ಧನೆ ಮಾದರಿ ಹೊಂದಿದೆ ಎಂದರು.

ನಾನು ಕೃಷಿ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ನಿರಂತರವಾಗಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ಷೇತ್ರದಲ್ಲಿ ಸುಧಾರಣೆ ಹಾಗೂ ಹೊಸ ಆಲೋಚನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದ್ದೇನೆ. ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದರ ಜೊತೆಗೆ ದೇಶದ ಒಟ್ಟಾರೆ ಆರ್ಥಿಕ ಬೆಳವಣಿಗೆಗೂ ಸಹಕಾರಿಯಾಗಲಿದೆ ಎಂದರು.

ಡಾ. ಸೌಮ್ಯ ಸ್ವಾಮಿನಾಥನ್

ಚೆನ್ನೈನ ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಸೌಮ್ಯ ಸ್ವಾಮಿನಾಥನ್ ಅವರು “ಒನ್ ಹೆಲ್ತ್ ಟು ಬಯೋಹ್ಯಾಪಿನೆಸ್: ಬೆಳೆ ಬೆಳೆಯುವಿಕೆಗೆ ಮೀರಿದ ಆಹಾರ ವ್ಯವಸ್ಥೆಗಳ ಮರುಚಿಂತನೆ” ವಿಷಯದ ಕುರಿತು ಮಾತನಾಡಿದರು.

ಕೃಷಿ ಹಾಗೂ ಸಹಾಯಕ ಕ್ಷೇತ್ರಗಳು ದೇಶಕ್ಕೆ ಇನ್ನೂ ಅತ್ಯಂತ ಪ್ರಮುಖವಾಗಿವೆ ಎಂದ ಅವರು, ಅಭಿವೃದ್ಧಿಯಿದ್ದರೂ ಕೃಷಿ, ಮೀನುಗಾರಿಕೆ ಮತ್ತು ಪಶುಪಾಲಕ ಸಮುದಾಯಗಳಲ್ಲಿ ಸಂಕಷ್ಟ ಮುಂದುವರಿದಿದೆ ಎಂದು ಹೇಳಿದರು.

ಆಹಾರ ಕೊರತೆ ಇಲ್ಲದಿದ್ದರೂ ಪೌಷ್ಟಿಕಾಂಶ ಕೊರತೆ ಇದೆ. ಇದರಿಂದ ಮಧುಮೇಹದಂತಹ ಅಸಂಕ್ರಾಮಿಕ ರೋಗಗಳ ಪ್ರಮಾಣ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ ಎಂದರು. ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ, ಕಡಿಮೆ ತೂಕ ಹಾಗೂ ಹೆಣ್ಣುಮಕ್ಕಳು ಮತ್ತು ಮಹಿಳೆಯರಲ್ಲಿ ರಕ್ತಹೀನತೆ ವ್ಯಾಪಕವಾಗಿದೆ. ಇದನ್ನು ಅವರು ತ್ರಿವಿಧ ಬಾಧೆ — ಅಪೌಷ್ಟಿಕತೆ, ಅತಿಪೌಷ್ಟಿಕತೆ ಮತ್ತು ಸೂಕ್ಷ್ಮಪೋಷಕಾಂಶ ಕೊರತೆ — ಎಂದು ವಿವರಿಸಿದರು.

ಆಹಾರದಲ್ಲಿ ವೈವಿಧ್ಯತೆಯ ಕೊರತೆ ಇದೆ. ಆಹಾರ ಪದ್ಧತಿ ಕಾರ್ಬೋಹೈಡ್ರೇಟ್ ಆಧಾರಿತವಾಗಿದ್ದು, ಗುಣಮಟ್ಟದ ಪ್ರೋಟೀನ್ ಹಾಗೂ ಅಗತ್ಯ ವಿಟಮಿನ್ ಮತ್ತು ಖನಿಜಗಳ ಸೇವನೆ ಕಡಿಮೆಯಾಗಿದೆ ಎಂದರು.

ಜಾಗತಿಕ ಆಘಾತಗಳ ಯುಗ

ಪ್ರಪಂಚವು ಹವಾಮಾನ ವೈಪರೀತ್ಯ,ಜೀವ ವೈವಿಧ್ಯ ನಾಶ, ಪ್ಲಾಸ್ಟಿಕ್–ಗಾಳಿ–ನೀರಿನ ಮಾಲಿನ್ಯಗಳಂತಹ ದೊಡ್ಡ ಬೆದರಿಕೆಗಳನ್ನು ಎದುರಿಸುತ್ತಿದೆ. ಜೊತೆಗೆ ಭೌಗೋಳಿಕ ರಾಜಕೀಯ ಒತ್ತಡಗಳು, ಸಂಘರ್ಷಗಳು ಮತ್ತು ಯುದ್ಧಗಳು ಜಾಗತಿಕ ಅಸ್ಥಿರತೆಯನ್ನು ಹೆಚ್ಚಿಸುತ್ತಿವೆ ಎಂದು ಹೇಳಿದರು. ಈ ಎಲ್ಲಾ ಸವಾಲುಗಳನ್ನು ಒಟ್ಟಾಗಿ ಪರಿಶೀಲಿಸಿ ಸ್ಥಿರ ಪರಿಹಾರಗಳನ್ನು ಹುಡುಕಬೇಕಿದೆ ಎಂದರು.

ಉಮಾ ಮಹಾದೇವನ್ ದಾಸ್‌ಗುಪ್ತ

ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹಾದೇವನ್ ದಾಸ್‌ಗುಪ್ತ ಅವರು ಮಾತನಾಡಿ, ಸ್ವಾತಂತ್ರ್ಯದ ಸಮಯದಲ್ಲಿ ಭಾರತ ತೀವ್ರ ಆಹಾರ ಕೊರತೆಯನ್ನು ಎದುರಿಸಿದ್ದನ್ನು ನೆನಪಿಸುತ್ತದೆ ಎಂದು ಡಾ. ಎಂ.ಎಸ್. ಸ್ವಾಮಿನಾಥನ್ ಅವರ ಕಾರ್ಯವು ನೆನಪಿಸುತ್ತದೆ ಎಂದರು.

1960ರ ದಶಕದಲ್ಲಿ ನಡೆದ ಹಸಿರು ಕ್ರಾಂತಿ ಜಪಾನ್, ಅಮೆರಿಕಾ, ಮೆಕ್ಸಿಕೋ ಮತ್ತು ಭಾರತದಂತಹ ರಾಷ್ಟ್ರಗಳ ಅಂತಾರಾಷ್ಟ್ರೀಯ ಸಹಕಾರದ ಫಲವಾಗಿದ್ದು, ಕೃಷಿಯಲ್ಲಿ ಮಹತ್ತರ ಬದಲಾವಣೆ ತಂದಿತು ಎಂದು ಅವರು ವಿವರಿಸಿದರು.

21ನೇ ಶತಮಾನದಲ್ಲಿ ಹವಾಮಾನ ಬದಲಾವಣೆ ಮತ್ತು ಪರಿಸರ ಒತ್ತಡಗಳಂತಹ ಸವಾಲುಗಳನ್ನು ಎದುರಿಸಲು ವಿಜ್ಞಾನ, ಸಂಶೋಧನೆ ಮತ್ತು ರೈತರ ನಡುವಿನ ಸಹಕಾರ ಅತ್ಯಂತ ಮುಖ್ಯ ಎಂದು ಹೇಳಿದರು.

ಅಂತಾರಾಷ್ಟ್ರೀಯ ಕೃಷಿ ವ್ಯಾಪಾರ ಮೇಳ 2026

“ಉತ್ಪಾದನೆಯಾಚೆ ಕೃಷಿ – ರೈತರ ಸಬಲೀಕರಣ” ಎಂಬ ಧ್ಯೇಯವಾಕ್ಯದಡಿಯಲ್ಲಿ, ಕರ್ನಾಟಕ ಕೃಷಿ ಇಲಾಖೆ ವತಿಯಿಂದ ಬೆಂಗಳೂರಿನಲ್ಲಿ ಫೆಬ್ರವರಿ 06, 07 ಮತ್ತು 08, 2026ರಂದು ಅಂತಾರಾಷ್ಟ್ರೀಯ ಕೃಷಿ ವ್ಯಾಪಾರ ಮೇಳ 2026 ಆಯೋಜಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾಲೂರು ಕ್ಷೇತ್ರ: ಮರು ಮತ ಎಣಿಕೆ, ಕಾಂಗ್ರೆಸ್ ನ ನಂಜೇಗೌಡರೇ ಗೆಲುವು! ಸುಪ್ರೀಂಕೋರ್ಟ್ ಮಹತ್ವದ ತೀರ್ಪು!

ಪ್ರಧಾನಿ ಮೋದಿ ಪ್ರತಿಕ್ರಿಯೆ ಇಲ್ಲದೆ ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯ ಅಂಗೀಕಾರ; ವಿಪಕ್ಷಗಳ ತೀವ್ರ ಗದ್ದಲ, ಮಧ್ಯಾಹ್ನ 3 ಗಂಟೆಗೆ ಲೋಕಸಭೆ ಕಲಾಪ ಮುಂದೂಡಿಕೆ

ದುಬೈ ಬಿಗ್ ಟಿಕೆಟ್ ಲಕ್ಕಿ ಡ್ರಾ: ಉಡುಪಿಯ ಯುವಕನಿಗೆ ಹೊಡೆಯಿತು ಭರ್ಜರಿ 49 ಕೋಟಿ ರೂ. ಲಾಟ್ರಿ!

ಭಾರತೀಯ ವಾಯುಪಡೆಗೆ ಹಸ್ತಾಂತರಿಸಲು 5 ತೇಜಸ್ ಜೆಟ್‌ಗಳು ಸಿದ್ಧ: HAL

Thank you, Pakistan: ಭಾರತದ ವಿರುದ್ಧ ಬಾಂಗ್ಲಾದೇಶದ ಹಗೆತನ ಬಟ್ಟ ಬಯಲು!

SCROLL FOR NEXT