ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ "ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ"ಉದ್ಘಾಟನೆ 
ರಾಜ್ಯ

ಅಣೆಕಟ್ಟು ಸುರಕ್ಷತೆಯಲ್ಲಿ ಕರ್ನಾಟಕ ದೇಶಕ್ಕೆ ಮಾದರಿ; ಕೇಂದ್ರ ಅನುಮತಿ ಕೊಟ್ಟರೆ ಮೇಕೆದಾಟು, UKP ಯೋಜನೆ ಜಾರಿ: ಡಿ.ಕೆ ಶಿವಕುಮಾರ್

ಎಲ್ಲರೂ ಬೆಂಗಳೂರಿಗೆ ಬರಲು ಇಚ್ಛಿಸುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ನಾವು ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಯೋಜನೆ ಪರವಾಗಿ ತೀರ್ಪು ನೀಡಿದೆ.

ಬೆಂಗಳೂರು: ಕೇಂದ್ರ ಸರ್ಕಾರ ಅಗತ್ಯ ಅನುಮತಿ ನೀಡಿದರೆ ಕರ್ನಾಟಕ ಸರ್ಕಾರವು ಮೇಕೆದಾಟು ಹಾಗೂ ಕೃಷ್ಣಾ ಮೇಲ್ದಂಡೆ ಬಾಕಿ ಯೋಜನೆಗಳನ್ನು ಜಾರಿ ಮಾಡಲಿದೆ. ಕೇಂದ್ರ ಸರ್ಕಾರ ನಮಗೆ ಸಹಕಾರ ನೀಡುವ ಭರವಸೆ ಇದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಸಂಸ್ಥೆಯ ಜೆಜೆ ಟಾಟಾ ಸಭಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀವೆಲ್ಲರೂ ಬೆಂಗಳೂರಿನಲ್ಲಿದ್ದೀರಿ. ಇಲ್ಲಿ 1.50 ಕೋಟಿ ಜನಸಂಖ್ಯೆ ಇದ್ದು, ವಿಶ್ವದಾದ್ಯಂತ ಕೈಗಾರಿಕೋದ್ಯಮಿಗಳು ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಇಡೀ ವಿಶ್ವ ಭಾರತವನ್ನು ಬೆಂಗಳೂರು ಮೂಲಕ ನೋಡುತ್ತಿದೆ. ಇಲ್ಲಿರುವ ಹವಾಮಾನ ಹಾಗೂ ಸಂಸ್ಕೃತಿ ಎಲ್ಲರ ಆಕರ್ಷಣೆಯಾಗಿದೆ.

ಎಲ್ಲರೂ ಬೆಂಗಳೂರಿಗೆ ಬರಲು ಇಚ್ಛಿಸುತ್ತಿದ್ದಾರೆ. ಹೀಗಾಗಿ ಎಲ್ಲರಿಗೂ ನೀರು ಪೂರೈಸುವ ಜವಾಬ್ದಾರಿ ನಮ್ಮ ಮೇಲಿದೆ. ಹೀಗಾಗಿ ನಾವು ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದ್ದು, ಇತ್ತೀಚೆಗೆ ಸುಪ್ರೀಂ ಕೋರ್ಟ್ ಈ ಯೋಜನೆ ಪರವಾಗಿ ತೀರ್ಪು ನೀಡಿದೆ. ಆಮೂಲಕ ನಾವು ಈ ಯೋಜನೆ ಜಾರಿ ಮಾಡಲಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದ್ದೇವೆ. ಈ ಯೋಜನೆಯಿಂದ ಬೆಂಗಳೂರು ಸೇರಿದಂತೆ ಈ ಭಾಗದ ಪ್ರದೇಶಗಳಿಗೆ ಕುಡಿಯುವ ನೀರು ಹಾಗೂ 400 ಮೆ.ವ್ಯಾಟ್ ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.

ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ನಾವು ಪಾರದರ್ಶಕ ನೀತಿ ತರಲಾಗಿದ್ದು, ಭೂಮಿ ಕಳೆದುಕೊಳ್ಳುವ ರೈತರಿಗೆ 2013ರ ಕಾಯ್ದೆ ಅನುಸಾರ ಉತ್ತಮ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. 2025ರ ಡಿಸೆಂಬರ್ ವೇಳೆಗೆ ನಮ್ಮಲ್ಲಿ 1.72 ಲಕ್ಷ ಎಕರೆಯಷ್ಟು ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಲಾಗಿದೆ.

ಇನ್ನು ಅಣೆಕಟ್ಟು ಸುರಕ್ಷತಾ ಮಾರ್ಗಸೂಚಿಯಲ್ಲಿ ಅಣೆಕಟ್ಟಿನ ಸುತ್ತ 500 ಮೀಟರ್ ವರೆಗೂ ವಿಧಿಸಲಾಗಿರುವ ನಿಬಂಧನೆಯನ್ನು ಸಡಿಲಗೊಳಿಸಬೇಕು. ಆ ಮೂಲಕ ಅಣೆಕಟ್ಟುಗಳ ಬಳಿ ಪ್ರವಾಸೋದ್ಯಮಕ್ಕೆ ಅವಕಾಶ ಕಲ್ಪಿಸಿ ಸ್ಥಳೀಯ ಆರ್ಥಿಕತೆಗೆ ನೆರವಾಗಬೇಕು ಎಂದು ಕರ್ನಾಟಕ ಸರ್ಕಾರದ ಪರವಾಗಿ ಮನವಿ ಮಾಡುತ್ತೇನೆ” ಎಂದು ಕೋರಿದರು.

ಅಣೆಕಟ್ಟುಗಳು ನಮ್ಮ ದೇಶದ ಶಕ್ತಿ ಹಾಗೂ ಪ್ರಗತಿಯ ಪ್ರತೀಕ. ಅಣೆಕಟ್ಟುಗಳು ನಮ್ಮ ಭವಿಷ್ಯವನ್ನು ಕಾಪಾಡಿ, ರೈತರನ್ನು ಸಶಕ್ತರನ್ನಾಗಿ ಮಾಡುತ್ತದೆ. ಸ್ವಚ್ಛ ಇಂಧನ ಸೃಷ್ಟಿಸಿ, ನಮ್ಮ ಸಮುದಾಯವನ್ನು ಕಾಯುತ್ತಿವೆ. ನಮ್ಮ ಪೀಳಿಗೆಯನ್ನು ಸುಸ್ಥಿರವಾಗಿಟ್ಟು ಕಾಪಾಡುತ್ತಿರುವ ರಕ್ಷಕನಂತೆ ಕಾರ್ಯನಿರ್ವಹಿಸುತ್ತಿವೆ. ನೀರು ಸಮೃದ್ಧವಾದಷ್ಟು, ನಾಗರೀಕತೆ ಅಭಿವೃದ್ಧಿಯಾಗುತ್ತದೆ.

ನಮ್ಮಲ್ಲಿರುವ ಅನೇಕ ಅಣೆಕಟ್ಟುಗಳು 60-70 ವರ್ಷಗಳ ಹಳೆಯದಾಗಿವೆ. ಹೀಗಾಗಿ ಅಣೆಕಟ್ಟುಗಳ ಮೂಲಸೌಕರ್ಯ ದುರಸ್ತಿ ಕಾಮಗಾರಿಗಳು ಅಗತ್ಯವಾಗಿವೆ. ಇದರ ಜತೆಗೆ ಅನಿರೀಕ್ಷಿತ ಹವಾಮಾನ ವೈಪರಿತ್ಯ ನಮಗೆ ಹೆಚ್ಚಿನ ಸವಾಲೊಡ್ಡಿದೆ. ಅತಿಯಾದ ಮಳೆ, ಪ್ರವಾಹ ದೇಶದೆಲ್ಲೆಡೆ ಸಮಸ್ಯೆಯಾಗಿ ತಲೆದೋರಿವೆ. ನಮ್ಮ ಊಹೆಗಳ ಆಧಾರದ ಮೇಲೆ ಭವಿಷ್ಯದ ಅಣೆಕಟ್ಟುಗಳ ನಿರ್ವಹಣೆ ಅಸಾಧ್ಯ. ಹೀಗಾಗಿ ಎಲ್ಲಾ ಸವಾಲಿಗೆ ಪೂರ್ವ ತಯಾರಿ ಮಾಡಿಕೊಳ್ಳುವ ಆಯ್ಕೆಯಾಗಿ ಉಳಿದಿಲ್ಲ, ಅನಿವಾರ್ಯತೆಯಾಗಿದೆ” ಎಂದು ತಿಳಿಸಿದರು.

ಅಣೆಕಟ್ಟುಗಳ ಶಕ್ತಿ ಅಡಗಿರುವುದು ಅದನ್ನು ಹೇಗೆ ನಿರ್ಮಾಣ ಮಾಡಲಾಗಿದೆ ಎಂಬುದರ ಮೇಲೆ ಮಾತ್ರವಲ್ಲ, ಅದನ್ನು ಎಷ್ಟು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತದೆ ಎಂಬುದರ ಮೇಲೂ ನಿಂತಿದೆ. ಭಾರತದಲ್ಲಿ ಸುಮಾರು 6500 ಅಣೆಕಟ್ಟುಗಳಿದ್ದು, ವಿಶ್ವದಲ್ಲಿ ಅತಿ ಹೆಚ್ಚು ಅಣೆಕಟ್ಟುಗಳಿರುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿದೆ. ಕರ್ನಾಟಕ ರಾಜ್ಯದಲ್ಲಿ 232 ಅಣೆಕಟ್ಟುಗಳಿದ್ದು, ದೇಶದ ಮೂರನೇ ಎರಡು ಭಾಗದಷ್ಟು ಅಣೆಕಟ್ಟುಗಳು 25 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಹಳೆಯದಾಗಿವೆ.

ಇದು ನಮ್ಮಲ್ಲಿ ಅಣೆಕಟ್ಟುಗಳ ವ್ಯವಸ್ಥಿತ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿರುವುದನ್ನು ಸಾರುತ್ತಿದೆ. ಇಂದು ಅಣೆಕಟ್ಟುಗಳ ಸುರಕ್ಷತೆ ರಾಷ್ಟ್ರ ಮಟ್ಟದ ಆದ್ಯತೆಯಾಗಿದೆ. ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ಅಣೆಕಟ್ಟು ಪುನರ್ವಸತಿ ಮತ್ತು ಸುಧಾರಣಾ ಯೋಜನೆ (DRIP) ಮೂಲಕ ಅನೇಕ ನೆರವು ನೀಡಲಾಗುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಇದರ ಎರಡನೇ ಹಂತವನ್ನು ಜಾರಿಗೊಳಿಸಲಾಗುತ್ತಿದ್ದು, 58 ಅಣೆಕಟ್ಟುಗಳ ದುರಸ್ತಿ ಕಾಮಗಾರಿಗಳಿಗೆ 1500 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ” ಎಂದು ತಿಳಿಸಿದ್ದಾರೆ.

“ಜಲವೇ ಸಂಪತ್ತು, ಜಲವೇ ಇಂಧನ, ಜಲವೇ ಜೀವನ ಎಂಬುದು ನಮ್ಮೆಲ್ಲರಿಗೂ ಗೊತ್ತಿದೆ. ನಾವೆಲ್ಲರೂ ಒಟ್ಟಾಗಿ ಸೇರಿ ನಮ್ಮ ಆಸ್ತಿಯಾಗಿರುವ ಅಣೆಕಟ್ಟುಗಳನ್ನು ಕಾಪಾಡಿಕೊಳ್ಳೋಣ. ಅಣೆಕಟ್ಟುಗಳು ಕೇವಲ ಇಂಜಿನಿಯರ್ ಆಸ್ತಿ ಮಾತ್ರವಲ್ಲ, ಇದು ನಮ್ಮ ಆಹಾರ ಭದ್ರತೆ, ಇಂಧನ ಭದ್ರತೆ ಹಾಗೂ ಸಾಮಾಜಿಕ ಸ್ಥಿರತೆಯ ಅಸ್ತ್ರವಾಗಿದೆ. ಈ ಸಮ್ಮೇಳನದ ಮೂಲಕ ನಾವು ಪ್ರಬಲ ಶಿಫಾರಸ್ಸು, ಕಾರ್ಯರೂಪಕ್ಕೆ ತರಬಹುದಾದ ತಂತ್ರಗಾರಿಕೆಯನ್ನು ರೂಪಿಸೋಣ.

ಕರ್ನಾಟಕ ಸರ್ಕಾರ ಅಣೆಕಟ್ಟು ಸುರಕ್ಷತೆ ವಿಚಾರದಲ್ಲಿ ಕರ್ನಾಟಕವನ್ನು ದೇಶಕ್ಕೆ ಮಾದರಿ ರಾಜ್ಯವನ್ನಾಗಿ ಮಾಡಲು ಬದ್ಧವಾಗಿದೆ. ನಾವು ಅಣೆಕಟ್ಟುಗಳನ್ನು ನಿರ್ಮಿಸಿ, ರಕ್ಷಿಸಿ, ಮುನ್ನಡೆಸುತ್ತೇವೆ. ಇಂದು ನೀವೆಲ್ಲರೂ ಇಲ್ಲಿ ಸೇರಿದ್ದೀರಿ. ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಆ ಮೂಲಕ ನಮ್ಮ ಅಣೆಕಟ್ಟುಗಳನ್ನು ರಕ್ಷಣೆ ಮಾಡಿಕೊಂಡು ದೇಶ ಪ್ರಜ್ವಲಿಸುವಂತೆ ಮಾಡೋಣ” ಎಂದು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಚುನಾವಣೆಯಲ್ಲಿ BNP ಭರ್ಜರಿ ಗೆಲುವು: ತಾರಿಕ್ ರೆಹಮಾನ್ ಗೆ ಪ್ರಧಾನಿ ಮೋದಿ ಅಭಿನಂದನೆ; ಹೇಳಿದ್ದೇನು?

ಮಹಾ ಶಿವರಾತ್ರಿ ಮಹತ್ವ: ಆಧ್ಯಾತ್ಮಿಕ ಶುದ್ಧೀಕರಣ, ಪಾಪಗಳ ನಿವಾರಣೆ; ಕಡ್ಡಾಯವಾಗಿ ಮಾಡಿ ಉಪವಾಸ- ಜಾಗರಣೆ, ಪಂಚಾಕ್ಷರಿ ಮಂತ್ರ ಪಠಣೆ!

ಎಪ್ಸ್ಟೀನ್ ಜೊತೆಗಿನ 'ಸಂಬಂಧ': ಹರ್ದೀಪ್ ಪುರಿ ರಾಜೀನಾಮೆಗೆ ಸಂಸದರ ಒತ್ತಾಯ

Karnataka Budget 2026: ಮಾರ್ಚ್ 6ರಂದು ರಾಜ್ಯ ಬಜೆಟ್ ಮಂಡನೆ; ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳಿವು...

ತಿಹಾರ್ ಜೈಲಿನಲ್ಲಿದ್ದಾಗ 'ಹಿತ' ಕಾಯುವ ಭರವಸೆ ನೀಡಿದ್ದೀರಿ- ಸೋನಿಯಾ ಮುಂದೆ ಡಿಕೆಶಿ ಅಳಲು: ರಾಹುಲ್ ಭೇಟಿ ಬಳಿಕ ಹಸನ್ಮುಖರಾಗಿ ಹೊರಬಂದ DCM!

SCROLL FOR NEXT