ಬೆಂಗಳೂರು: ಡಿಸೆಂಬರ್ 31ರಂದು ನಡೆದ ಮುಷ್ಕರದಲ್ಲಿ ಭಾಗವಹಿಸಿದ ಗಿಗ್ ಕಾರ್ಮಿಕರಿಗೆ ಕಂಪನಿಗಳು ಶಾಕ್ ನೀಡಿದ್ದು, ಕಾರ್ಮಿಕರ ಐಡಿಗಳನ್ನು ಬ್ಲಾಕ್ ಮಾಡಿವೆ ಎಂಬ ಆರೋಪಗಳು ಕೇಳಿ ಬಂದಿದೆ.
ಕರ್ನಾಟಕ ಅಪ್ಲಿಕೇಶನ್ ಆಧಾರಿತ ಕಾರ್ಮಿಕರ ಒಕ್ಕೂಟದ ಭಾಗವಾಗಿರುವ ಬೆಂಗಳೂರಿನ 40,000 ಕ್ಕೂ ಹೆಚ್ಚು ಗಿಗ್ ಕಾರ್ಮಿಕರು ಬುಧವಾರ ನಡೆದ ಮುಷ್ಕರದಲ್ಲಿ ಭಾಗವಹಿಸಿದ್ದರು ಎಂದು ಭಾರತೀಯ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರ ಒಕ್ಕೂಟದ (IFAT) ಉಪಾಧ್ಯಕ್ಷ ಇನಾಯತ್ ಅಲಿ ಹೇಳಿದ್ದಾರೆ.
ಉತ್ತಮ ವೇತನ ದರಗಳು ಮತ್ತು 10 ನಿಮಿಷದ ಡೆಲಿವರಿ ಆಯ್ಕೆಯನ್ನು ತೆಗೆದು ಹಾಕುವಂತೆ ಮುಷ್ಕರ ನಡೆಸಲಾಗಿದೆ. ಈ ಆಯ್ಕೆ ಅಪಘಾತಗಳಿಗೆ ಹಾಗೂ ಸಂಚಾರ ನಿಯಮ ಉಲ್ಲಂಘನೆಗೆ ಕಾರಣವಾಗುತ್ತಿದೆ. ನಮ್ಮೊಂದಿಗೆ ಸಂಯೋಜಿತವಾಗಿರುವ ಕಾರ್ಮಿಕರಿಗೆ ಜನರೊಂದಿಗೆ ನೇರವಾಗಿ ಹೋಗಿ ಮಾತನಾಡುವಂತೆ ತಿಳಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ತಮ್ಮ ಅಳಲು ತೋಡಿಕೊಳ್ಳುವಂತೆ ತಿಳಿಸಲಾಗಿತ್ತು. ಇದನ್ನು ಗಮನಿಸಿರುವ ಕಂಪನಿಗಳು ಕಾರ್ಮಿಕರನ್ನು ಗುರ್ತಿಸಿ, ಸೂಚನೆ ಇಲ್ಲದೆ, ಅವರ ಐಡಿಗಳನ್ನು ನಿರ್ಬಂಧಿಸಿವೆ.
ಈ ಮೊದಲು ಕಂಪನಿಗಳು 4 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚಿನದಕ್ಕೆ 50 ರೂ. ಪಾವತಿಸುತ್ತಿದ್ದರು, ಈಗ ಅದನ್ನು 25-30 ರೂ.ಗಳಿಗೆ ಇಳಿಸಲಾಗಿದೆ (ವೇದಿಕೆಯನ್ನು ಅವಲಂಬಿಸಿ) ಎಂದು ಬೇಸರ ವ್ಯಕ್ತಪಡಿಸಿದ್ದಾರೆ.