ಚಿಕ್ಕಮಗಳೂರು: ಮಾಜಿ ಪ್ರೇಯಸಿಗೆ ಹುಟ್ಟುಹಬ್ಬದ ಸಂದೇಶ ಕಳುಹಿಸಿದ್ದಕ್ಕೆ ಯುವಕನೋರ್ವನನ್ನು ಚೂರಿ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತರೀಕೆರೆಯಲ್ಲಿ ನಡೆದಿದೆ. ಉಡೇವಾ ಗ್ರಾಮದ ನಿವಾಸಿ 28 ವರ್ಷದ ಮಂಜುನಾಥ್ ಮೇಲೆ ನಿನ್ನೆ ಸಂಜೆ ತರೀಕೆರೆ ತಾಲ್ಲೂಕಿನ ಅತ್ತಿಗನಾಲು ಗ್ರಾಮದಲ್ಲಿ ಕಿರಣ್, ವೇಣು, ಅಪ್ಪು ಮತ್ತು ಮನು ಎಂಬುವವರು ಹಲ್ಲೆ ನಡೆಸಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಮೃತಪಟ್ಟಿದ್ದಾನೆ.
ಕೊಲೆ ಆರೋಪಿ ಕಿರಣ್ ನ ಸಹೋದರಿಗೆ ಇನ್ ಸ್ಟಾಗ್ರಾಮ್ ನಲ್ಲಿ ಮಂಜುನಾಥ್ ಹುಟ್ಟುಹಬ್ಬದ ಸಂದೇಶ ಕಳುಹಿಸಿದ್ದನು. ಇದರಿಂದ ರೊಚ್ಚಿಗೆದ್ದ ಕಿರಣ್, ವೇಣು, ಅಪ್ಪು ಮತ್ತು ಮನು ಮಂಜುನಾಥ್ ಗೆ ಇರಿದಿದ್ದಾರೆ ಎಂದು ತಿಳಿದುಬಂದಿದೆ ಎಂದು ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಠೆ ತಿಳಿಸಿದ್ದಾರೆ.
ಅತ್ತಿಗನಾಲು ಅಂಡರ್‌ಪಾಸ್‌ನಲ್ಲಿ ಮಾತನಾಡಬೇಕಿದೆ ಎಂದು ಮಂಜುನಾಥ್ ನನ್ನು ಕಿರಣ್ ಕರೆಸಿಕೊಂಡಿದ್ದಾನೆ. ತನ್ನ ಸಹೋದರಿಗೆ ಸಂದೇಶ ಕಳುಹಿಸಿದ ಬಗ್ಗೆ ಕಿರಣ್, ಮಂಜುನಾಥ್ ನನ್ನು ಪ್ರಶ್ನಿಸಿದ್ದನು. ಅಲ್ಲಿ ಜಗಳ ನಡೆದಿದ್ದು, ನಂತರ ಕಿರಣ್ ಮಂಜುನಾಥ್ ಗೆ ಚಾಕುವಿನಿಂದ ಇರಿದಿದ್ದಾನೆ. ಕಿರಣ್ ನ ಸಹೋದರಿ ಮತ್ತು ಮಂಜುನಾಥ್ ಒಬ್ಬರಿಗೊಬ್ಬರು ಪರಿಚಿತರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಎನ್ನಲಾಗಿದೆ. ಇದೇ ವಿಚಾರವಾಗಿ ಕಿರಣ್ ಈ ಹಿಂದೆ ಆಕೆಯೊಂದಿಗೆ ಮಾತನಾಡದಂತೆ ಮಂಜುನಾಥ್ ಗೆ ಎಚ್ಚರಿಕೆ ನೀಡಿದ್ದನು ಎಂದು ಅಮಠೆ ಹೇಳಿದರು.
ಮಗಳ ಪ್ರೀತಿ ವಿಚಾರ ತಿಳಿದು ಪೋಷಕರು ಬೇರೊಬ್ಬನೊಂದಿಗೆ ವಿವಾಹ ನಿಶ್ಚಯ ಮಾಡಿಸಿದ್ದರು ಎನ್ನಲಾಗಿದೆ. ಸದ್ಯ ಕೊಲೆ ಪ್ರಕರಣದ ಸಂಬಂಧ ಎಲ್ಲಾ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.