ಬೆಂಗಳೂರು: ಹೊಸ ವರ್ಷವನ್ನು ಬೆಂಗಳೂರು ಜನತೆ ಸಂಭ್ರಮ ಹಾಗೂ ಸಡಗರದೊಂದಿಗೆ ಸ್ವಾಗತಿಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದು, ಕಳೆದ ವರ್ಷದ ಸಾಧನೆಗಳ ಸ್ಪೂರ್ತಿಯೊಂದಿಗೆ ನೂತನ ವರ್ಷವ ಸ್ವಾಗತಿಸೋಣ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2026ರ ಹೊಸ ವರ್ಷವನ್ನು ಅತ್ಯಂತ ಸಂತೋಷ-ಸಂಭ್ರಮದಿಂದ ಬರಮಾಡಿಕೊಳ್ಳುವ ಜೊತೆಗೆ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸೋಣ. ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು, ನಾಡಿನ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಈ ವರ್ಷವು ನಿಮ್ಮೆಲ್ಲರ ಜೀವನದಲ್ಲಿ ಅಪಾರ ಸುಖ, ಶಾಂತಿ, ಆರೋಗ್ಯ ಮತ್ತು ಯಶಸ್ಸನ್ನು ತರಲಿ ಎಂದು ಹಾರೈಸುತ್ತೇನೆಂದು ಹೇಳಿದ್ದಾರೆ.
ಹೊಸ ಗುರಿಗಳತ್ತ ಸಾಗೋಣ, ಕನಸುಗಳನ್ನು ನನಸಾಗಿಸೋಣ ಮತ್ತು ನಾವೆಲ್ಲರೂ ಜೊತೆಯಾಗಿ ಸಮೃದ್ಧ ಕರ್ನಾಟಕ ಕಟ್ಟೋಣಯ ಕಳೆದ ವರ್ಷದ ಸಾಧನೆಗಳ ಸ್ಪೂರ್ತಿಯೊಂದಿಗೆ ಈ ಹೊಸ ವರ್ಷ ಸ್ವಾಗತಿಸೋಣ. ಈ ಹೊಸ ವರ್ಷದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ, ಪ್ರೀತಿ ಮತ್ತು ವಿಶ್ವಾಸದೊಂದಿಗೆ ಕರ್ನಾಟಕದ ಪ್ರಗತಿಗಾಗಿ ಶ್ರಮಿಸೋಣ ಎಂದು ಹೇಳಿದ್ದಾರೆ.
ಕರ್ನಾಟಕವು ಸದ್ಯ ಕೈಗಾರಿಕೆ, ಶಿಕ್ಷಣ ಮೂಲಸೌಕರ್ಯ ಮತ್ತು ತಂತ್ರಜ್ಞಾನ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ನಾಡಿನ ಕೀರ್ತಿ ಪತಾಕೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲು ಕೈಜೋಡಿಸೋಣ ತಿಳಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರ್ನಾಟಕದ ಜನತೆಗೆ ಹೊಸ ವರ್ಷ-2026ರ ಶುಭಾಶಯಗಳು ಎಂದು ಹೇಳಿದ್ದು, ಈ ಹೊಸ ವರ್ಷವೂ ನಮ್ಮ ದೇಶವನ್ನು ಶಾಂತಿ, ಸಮೃದ್ಧಿ ಮತ್ತು ಏಕತೆಯ ಮಾರ್ಗದಲ್ಲಿ ಮುನ್ನಡೆಸುವ ಅವಕಾಶ ಒದಗಿಸಲಿ ಹಾಗೂ ಎಲ್ಲರಿಗೂ ಸಂತೋಷ, ಸಮೃದ್ಧಿ ಮತ್ತು ಮಿತಿಯಿಲ್ಲದ ಅವಕಾಶಗಳನ್ನು ತರಲಿ. ದೇಶದ ಉಜ್ವಲ ಭವಿಷ್ಯದ ಕಡೆಗೆ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ ಎಂದು ಶುಭ ಕೋರಿದ್ದಾರೆ.