ಬೆಂಗಳೂರು: ಬಂಡೆಗೆ ಅಳವಡಿಸಲಾಗಿದ್ದ ಸ್ಫೋಟಕ ಸ್ಫೋಟಿಸಿ 4 ಚಿರತೆಗಳು ಸಾವನ್ನಪ್ಪಿರುವ ಭೀಕರ ಘಟನೆ ಬೆಂಗಳೂರು ಹೊರವಲಯದಲ್ಲಿ ನಡೆದಿದೆ.
ಬೆಂಗಳೂರಿನ ಯಶವಂತಪುರ ಸಮೀಪ ಅಕ್ರಮ ಕಲ್ಲು ಗಣಿಗಾರಿಕೆ ವೇಳೆ ನಡೆದ ಬ್ಲಾಸ್ಟ್‌ಗೆ ಗರ್ಭಿಣಿ ಚಿರತೆ ಮತ್ತು ಅದರ ಹೊಟ್ಟೆಯಲ್ಲಿದ್ದ ಮೂರು ಮರಿಗಳು ಮೃತಪಟ್ಟಿವೆ. ಬಸವನತಾರ ಅರಣ್ಯ ಪ್ರದೇಶದಲ್ಲಿ ನಡೆದ ದುರಂತ ಘಟನೆಯಲ್ಲಿ ಗರ್ಭಿಣಿ #ಚಿರತೆ ಮತ್ತು ಅದರ ಮೂರು ಹುಟ್ಟಲಿರುವ ಮರಿಗಳು ಕಲ್ಲು ಗಣಿಗಾರಿಕೆ ಚಟುವಟಿಕೆಗಳಿಂದಾಗಿ ಸತ್ತಿವೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಡಿಸೆಂಬರ್ 27, 2025 ರಂದು ದಿನನಿತ್ಯದ ಗಸ್ತು ತಿರುಗುತ್ತಿದ್ದಾಗ, ಕಗ್ಗಲೀಪುರ ಶ್ರೇಣಿಯ ಅರಣ್ಯ ಅಧಿಕಾರಿಗಳು ಸರ್ವೆ ಸಂಖ್ಯೆ 51 ರಲ್ಲಿ 3-4 ವರ್ಷ ವಯಸ್ಸಿನ ಹೆಣ್ಣು ಚಿರತೆಯ ಮೃತದೇಹವನ್ನು ಪತ್ತೆ ಮಾಡಿದರು. ನಂತರ ಮರಣೋತ್ತರ ಪರೀಕ್ಷೆಯಲ್ಲಿ ಚಿರತೆ ತನ್ನ ಗರ್ಭದಲ್ಲಿ ಮೂರು ಮರಿಗಳನ್ನು ಹೊಂದಿತ್ತು ಎಂದು ತಿಳಿದುಬಂದಿದೆ.
ಪ್ರಾಥಮಿಕ ಅಂದಾಜಿನ ಪ್ರಕಾರ, ಬೃಹತ್ ಕಲ್ಲಿನ ಸ್ಫೋಟದ ಪರಿಣಾಮ ಚಿರತೆ ಸಾವನ್ನಪ್ಪಿದೆ. ಹತ್ತಿರದ ಕ್ವಾರಿಯಲ್ಲಿ ಭಾರೀ ಸ್ಫೋಟದಿಂದ ಉರುಳಿದ ಬಂಡೆಯೊಂದು ಚಿರತೆಗೆ ಡಿಕ್ಕಿ ಹೊಡೆದಿದೆ. ಈ ಘಟನೆ ನಡೆದು 2 ಮೂರು ದಿನಗಳ ಬಳಿಕ ಚಿರತೆ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ತನಿಖೆಗೆ ಆದೇಶ
ಇನ್ನು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಜನವರಿ 1, 2026 ರಂದು ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ, ಗಣಿಗಾರಿಕೆ ಚಟುವಟಿಕೆಗಳು ಸಂರಕ್ಷಿತ ಅರಣ್ಯ ವಲಯಗಳನ್ನು ಅತಿಕ್ರಮಿಸುತ್ತಿವೆಯೇ ಎಂಬುದರ ಕುರಿತು "ಸಮಗ್ರ ತನಿಖೆ"ಗೆ ಸಚಿವರು ಆದೇಶಿಸಿದ್ದಾರೆ.
"ಈ ವನ್ಯಜೀವಿಯ ಸಾವಿಗೆ ಕಾರಣರಾದವರ ವಿರುದ್ಧ ಸಂಪೂರ್ಣ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಲಾಗಿದೆ" ಎಂದು ಸಚಿವ ಖಂಡ್ರೆ ಹೇಳಿದರು. ಎಫ್‌ಐಆರ್ ದಾಖಲಿಸಲಾಗಿದ್ದು, ಅರಣ್ಯ ಇಲಾಖೆ ತಂಡಗಳು ಪ್ರಸ್ತುತ ಕ್ವಾರಿ ಸ್ಥಳಗಳ ಬಳಿಯ ಅರಣ್ಯ ಗಡಿಗಳನ್ನು ಪರಿಶೀಲಿಸುತ್ತಿವೆ.
ಅಂತೆಯೇ ನಾನು ಬೀದರ್ನಲ್ಲಿದ್ದೆ. ಸಾಕಷ್ಟು ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದೆ. ಅವರು ಕರೆ ಮಾಡಿದ್ದರಂತೆ. ನಾನು ಫೋನ್ ಬದಲಾಯಿಸಿದ ಕಾರಣ ನಾನು ಕರೆ ಸ್ವೀಕರಿಸಲು ಆಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ತಪ್ಪು ಮಾಡಿದವರ ಬಿಡೋ ಮಾತೇ ಇಲ್ಲ: ಕ್ವಾರಿ ಕುರಿತು ಸಚಿವರ ಸ್ಪಷ್ಟನೆ
ಅಂತೆಯೇ ಕ್ವಾರಿಯವರು ಬ್ಲಾಸ್ಟ್ ಮಾಡಿದ್ದಾರೆ. ಕ್ವಾರಿ ಅರಣ್ಯದ ಒಳಗಡೆ ಬರುವುದಿಲ್ಲ, ಹೊರಗೆ ಬರುತ್ತೆ. ನಮ್ಮ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಬ್ಲಾಸ್ಟ್ ಮಾಡಿದ ಕಾರಣಕ್ಕಾಗಿ ಒಂದು ಚಿರತೆ ಸತ್ತಿದೆ. ಚಿರತೆ ಮರಣೋತ್ತರ ಪರೀಕ್ಷೆ ಮಾಡಿದಾಗ ಹೊಟ್ಟೆಯಲ್ಲಿ ಮರಿ ಇತ್ತು ಅಂತ ಗೊತ್ತಾಗಿದೆ. ಅದನ್ನ ಅತ್ಯಂತ ಗಂಭೀರವಾಗಿ ನಮ್ಮ ಇಲಾಖೆ ಪರಿಗಣಿಸುತ್ತೆ. ತಪ್ಪಿತಸ್ಥರ ವಿರುದ್ಧ ಈಗಾಗಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಅವರ ವಿರುದ್ಧ ಅತ್ಯಂತ ಕಠಿಣವಾದ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಂಡ್ರೆ ಹೇಳಿದರು.
ಅಂತೆಯೇ ವನ್ಯಜೀವಿ ಸಂರಕ್ಷಣೆ ನಮ್ಮ ಆದ್ಯತೆ. ವನ್ಯಜೀವಿ ಸಂರಕ್ಷಣೆ ಮಾಡಿದರೆ ಮಾತ್ರ ಪ್ರಕೃತಿಯ ಸಮತೋಲನ ಕಾಪಾಡಲು ಸಾಧ್ಯ. ನಾವು ಆ ವಿಚಾರದ ಬಗ್ಗೆ ಬಹಳ ಗಂಭೀರವಾಗಿದ್ದೇವೆ. ನಾನು ಎಸ್‌ಟಿ ಸೋಮಶೇಖರ್ ಅವರ ಜೊತೆಗೂ ಕೂಡ ಮಾತನಾಡುತ್ತೇನೆ. ಕ್ವಾರಿ ಅರಣ್ಯ ಒಳಗಡೆ ಇಲ್ಲ ಅಂತ ಮಾಹಿತಿ ಇದೆ. ಸಾಕಷ್ಟು ವರ್ಷಗಳಿಂದ ಕೆಲ ಗಣಿಗಾರಿಕೆಗಳು ನಡೆಯುತ್ತಿವೆ.
ನಿಯಮಾವಳಿಯಲ್ಲಿ ಅವಕಾಶ ಇದೆ ಮಾರ್ಗಸೂಚಿಯಲ್ಲಿ ಏನಾದರೂ ಉಲ್ಲಂಘನೆ ಆಗಿದ್ದರೆ ಅತ್ಯಂತ ಕಠಿಣವಾದ ಕ್ರಮವನ್ನು ತೆಗೆದುಕೊಳ್ಳುತ್ತೆ. ಯಾರೇ ಇರಲಿ ಎಷ್ಟೇ ಒತ್ತಡ ಬರಲಿ, ಹಿಂದೆನೂ ನಾವು ಬಿಟ್ಟಿಲ್ಲ ಮುಂದೇನು ಬಿಡಲ್ಲ. ಪಾರದರ್ಶಕವಾದ ತನಿಖೆ ನಡೆಯುತ್ತದೆ ಕ್ರಮ ಆಗುತ್ತೆ. ಲೀಗಲ್ ಮೈನಿಂಗ್ ಇದ್ದರೂ ಕೂಡ ಈ ರೀತಿ ಬ್ಲಾಸ್ಟ್ ಮಾಡಲು ಅವಕಾಶವಿಲ್ಲ. ಈಗಾಗಲೇ ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಎಫ್ಐಆರ್ ದಾಖಲಿಸಿದ್ದಾರೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.