ಬೆಂಗಳೂರು: ನೈಸ್ ಸಂಸ್ಥೆಯ ಕೆಲವು ಕೆಐಎಡಿಬಿ ಜಾಗವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದೆವು. ಇದಕ್ಕೆ ಅವರು ತಕರಾರು ಎತ್ತಿದ್ದಾರೆ. ನೈಸ್ ನವರು ತಾವು ಸರ್ಕಾರಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸುವುದು ನಮಗೆ ಗೊತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿಕೆ. ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.
ಡಿಕೆ.ಶಿವಕುಮಾರ್ ಬೆಂಗಳೂರಿನ ಚಲ್ಲಘಟ್ಟ ಹಾಗೂ ಭೀಮನಕುಪ್ಪೆಯ ಕೆಂಪೇಗೌಡ ಬಡಾವಣೆ ಸಮೀಪ ಸ್ಕೈಡೆಕ್ ನಿರ್ಮಾಣದ ಸ್ಥಳ ಪರಿಶೀಲನೆ ಹಾಗೂ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದರು.
500 ಕೋಟಿ ರೂ. ಮೌಲ್ಯದ ಸ್ಕೈಡೆಕ್ ಯೋಜನೆ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಅವರು, ಭೂಮಿ ಲಭ್ಯತೆ, ವಿನ್ಯಾಸ ಸಾಧ್ಯತೆ, ಏರ್‌ಸ್ಪೇಸ್ ನಿರ್ಬಂಧಗಳು ಹಾಗೂ ಯೋಜನೆ ಅನುಷ್ಟಾನದ ಅವಧಿ ಕುರಿತು ಮಾಹಿತಿ ಪಡೆದರು.
ಬಳಿಕ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (NICE)ಗೆ ಸಂಬಂಧಿಸಿದ ಭೂ ವಿವಾದಗಳ ಕುರಿತು ಮಾತನಾಡಿದ ಅವರು, ಕಾನೂನು ವ್ಯವಹಾರ ಎದುರಾದರೆ ಪರ್ಯಾಯ ಭೂ ಜಾಗಗಳನ್ನು ಪರಿಶೀಲಿಸುವುದಾಗಿ ಹೇಳಿದರು.
ನೈಸ್ ಸಂಸ್ಥೆ ಸರ್ಕಾರಕ್ಕಿಂತ ನಾವೇ ದೊಡ್ಡವರು ಎಂಬ ಭ್ರಮೆಯಲ್ಲಿದೆ. ಅವರಿಗೆ ಸೂಕ್ತ ಪಾಠ ಕಲಿಸುವುದು ನನಗೆ ತಿಳಿದಿದೆ ಎಂದು ಕಿಡಿಕಾರಿದರು.
ಯೋಜನೆಗೆ ಅಗತ್ಯವಿರುವ ಒಂದು ಭೂಮಿಗೆ ಸರ್ಕಾರ ನೈಸ್‌ನಿಂದ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಕೋರಿದೆ. ನಾವು ಅವರ ಬಳಿ ಎನ್‌ಒಸಿ ಮಾತ್ರ ಕೇಳಿದ್ದೇವೆ, ಆದರೆ, ಅವರು ಅದನ್ನು ನೀಡಿಲ್ಲ. ಆದರೂ, ನಾವು ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ತಿಳಿಸಿದರು.
ಯೋಜನೆಗಾಗಿ ಬಿಡಿಎ ವ್ಯಾಪ್ತಿಯಲ್ಲಿರುವ ಭೂಮಿ ಅಂತಿಮಗೊಳಿಸಲಾಗಿದ್ದು, ಬಿಡಿಎ ಯೋಜನೆಯನ್ನು ಜಾರಿಗೊಳಿಸಲಿದೆ. ಸ್ಕೈಡೆಕ್ ಗಾಗಿ ನಾವು ಬೇರೆ ಕಡೆ ಬಿಡಿಎ ಜಾಗ ಗುರುತಿಸಿದ್ದೇವೆ. ವಿಮಾನ ಹಾರಾಟದ ಟವರ್ ಸಮಸ್ಯೆ ಇರುವ ಕಾರಣ ಇದನ್ನು ಸೂಕ್ತ ಜಾಗದಲ್ಲಿ ನಿರ್ಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.