ಬೆಂಗಳೂರು: ಅಕ್ರಮ ಬಾಂಗ್ಲಾದೇಶಿ ವಲಸಿಗರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂಬ ಬಿಜೆಪಿ ಆರೋಪವನ್ನು ರಾಜ್ಯ ಸರ್ಕಾರ ಗುರುವಾರ ನಿರಾಕರಿಸಿದೆ.
ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಕರ್ನಾಟಕದವರಲ್ಲದ ಹೊರಗಿನವರಿಗೆ ಮನೆ ಹಂಚಿಕೆ ಮಾಡಲು ಹೇಗೆ ಸಾಧ್ಯ? ಅವರು ಬಾಂಗ್ಲಾದೇಶಿಗಳಾಗಿದ್ದರೆ, ವಿರೋಧ ಪಕ್ಷಗಳು ಅದನ್ನು ಸಾಬೀತುಪಡಿಸಲಿ. ಬೇಜವಾಬ್ದಾರಿಯಿಂದ ಮಾತನಾಡಬಾರದು ಎಂದು ಹೇಳಿದ್ದಾರೆ.
ವಸತಿ ಯೋಜನೆಗಳ ಅಡಿಯಲ್ಲಿ ಮನೆ ಹಂಚಿಕೆ ಮಾಡಬೇಕಾದರೆ, ಆಧಾರ್ ಮತ್ತು ಬಿಪಿಎಲ್ ಕಾರ್ಡ್‌ಗಳಂತಹ ಮಾನ್ಯ ದಾಖಲೆಗಳು ಬೇಕಾಗುತ್ತವೆ. ಅವರೆಲ್ಲರೂ ಸ್ಥಳೀಯರು. ಹೊರಗಿನವರು ತಾತ್ಕಾಲಿಕವಾಗಿ ವಾಸಿಸುತ್ತಿದ್ದರೂ ವರಿಗೆ ಮನೆಗಳನ್ನು ಮಂಜೂರು ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಲ್ಲಿರುವವರು ಬಡವರು, ಯಾರೂ ಶ್ರೀಮಂತರಿಲ್ಲ. ಶ್ರೀಮಂತರು ಅಂತಹ ಮನೆಗಳಲ್ಲಿ ವಾಸಿಸುವುದಿಲ್ಲ. ಹೀಗಾಗಿ ಬಡವರಿಗೆ ಸರ್ಕಾರ ಮನೆಗಳನ್ನು ಹಂಚಿಕೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ಮಾತನಾಡಿ, ಯಾವುದೇ ಅಕ್ರಮ ವಲಸಿಗರು ಕಂಡುಬಂದರೆ ಪೊಲೀಸ್ ತಪಾಸಣೆ ಮತ್ತು ಗಡೀಪಾರು ಮಾಡಲಾಗುವುದು ಎಂದು ಹೇಳಿದರು.
ಡಿಸೆಂಬರ್ 20 ರಂದು ಫಕೀರ್ ಮತ್ತು ವಸೀಮ್ ಕಾಲೋನಿಗಳಲ್ಲಿ ಘನತ್ಯಾಜ್ಯ ನಿರ್ವಹಣೆಗಾಗಿ ಮೀಸಲಿಟ್ಟ ಸರ್ಕಾರಿ ಭೂಮಿಯಲ್ಲಿ 167 ಅನಧಿಕೃತ ಮನೆಗಳನ್ನು ಕೆಡವಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ಇತರರಿಂದ ತೀವ್ರ ವಿರೋಧದ ನಂತರ, ಸಿದ್ದರಾಮಯ್ಯ ಸರ್ಕಾರ ಕೋಗಿಲು ನಿರಾಶ್ರಿತರಿಗೆ ಬೈಯಪ್ಪನಹಳ್ಳಿಯಲ್ಲಿ ಮನೆಗಳನ್ನು ಹಂಚಿಕೆ ಮಾಡುವುದಾಗಿ ಘೋಷಿಸಿದ್ದರು.