ಬೆಂಗಳೂರು: ಬಳ್ಳಾರಿಯಲ್ಲಿ ಕಳೆದ ರಾತ್ರಿ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಸಿಎಂ,ಘಟನೆ ಬಗ್ಗೆ ತನಿಖೆ ಮಾಡಲು ಗೃಹ ಇಲಾಖೆಗೆ ಸೂಚಿಸಿದ್ದೇನೆ. ಅದು ಬಿಜೆಪಿಯವರ ಗನ್ ನಿಂದ ಬುಲೆಟ್ ಹಾರಿದೆಯೇ ಇಲ್ಲ ಕಾಂಗ್ರೆಸ್ ನವರ ಗನ್ ನಿಂದ ಬುಲೆಟ್ ಹಾರಿದೆಯೇ ಎಂದು ತಿಳಿಯಬೇಕಿದೆ, ತನಿಖೆ ಮಾಡಿ ವರದಿ ನೀಡಿ ಎಂದು ಹೇಳಿದ್ದೇನೆ ಎಂದರು.
ಶಾಸಕ ಭರತ್ ರೆಡ್ಡಿಯವರ ಆಪ್ತ ಸತೀಶ್ ರೆಡ್ಡಿಯವರು ಭದ್ರತೆಗೆ ಗನ್ ಇಟ್ಟುಕೊಂಡಿದ್ದಾರೆ. ಗಾಳಿಯಲ್ಲಿ ಗುಂಡು ಹಾರಿಸಿದಾಗ ಕಾರ್ಯಕರ್ತ ರಾಜಶೇಖರ್ ಗೆ ತಗುಲಿ ಮೃತಪಟ್ಟಿದ್ದಾರೆ. ಗುಂಡು ಯಾರ ಬುಲೆಟ್ ನಿಂದ ಹೋಗಿದೆ ಎಂದು ಗೊತ್ತಾಗಬೇಕಿದೆ ಎಂದರು.
ಶೇ 83.61 ರಷ್ಟು ಕರ್ನಾಟಕದ ಮತದಾರರು EVM ಬಗ್ಗೆ ವಿಶ್ವಾಸ ಹೊಂದಿದ್ದಾರೆಂದು ಸಮೀಕ್ಷೆಯೊಂದು ಬಹಿರಂಗಪಡಿಸಿದ್ದು, ಕಲಬುರಗಿಯಲ್ಲಿ ಅತಿ ಹೆಚ್ಚು ಮಂದಿ ಇವಿಎಂ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂಬ ಬಗ್ಗೆ ಕೇಳಿದಾಗ ಸಿಎಂ, ರಾಹುಲ್ ಗಾಂಧಿಯವರು ಯಾವತ್ತೂ ಸುಳ್ಳು ಹೇಳಿಲ್ಲ, ಅವರು ಸರಿಯಾಗಿ ಅಧ್ಯಯನ ಮಾಡಿ, ತನಿಖೆ ಮಾಡಿದ ನಂತರವೇ ಬಹಿರಂಗವಾಗಿ ಆರೋಪ ಮಾಡಿದ್ದಾರೆ ಎಂದರು.
ಬಳ್ಳಾರಿ ಹಿಂಸಾಚಾರದ ಕುರಿತು ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ಮಹರ್ಷಿ ವಾಲ್ಮೀಕಿ ಪ್ರತಿಮೆಯ ಪ್ರಸ್ತಾವಿತ ಉದ್ಘಾಟನೆಗೆ ಸಂಬಂಧಿಸಿದ ಬ್ಯಾನರ್ ವಿಷಯಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಮತ್ತು ಸ್ಥಳೀಯ ಶಾಸಕ ನರ ಭರತ್ ರೆಡ್ಡಿ ಅವರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯಿತು. ಬ್ಯಾನರ್‌ಗಳನ್ನು ತೆಗೆದುಹಾಕಲಾಯಿತು.
ಇದು ಗುಂಪುಗಳ ನಡುವೆ ಕಲ್ಲು ತೂರಾಟಕ್ಕೆ ಕಾರಣವಾಯಿತು. ನಂತರ ಗುಂಡಿನ ದಾಳಿ ನಡೆದು ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ನಾನು ತನಿಖೆಗೆ ಆದೇಶಿಸಿದ್ದೇನೆ. ಚಿತ್ರದುರ್ಗ ದಾವಣಗೆರೆಯಿಂದ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ಈಗ ಶಾಂತಿಯುತವಾಗಿದೆ. ಕೆಲವರನ್ನು ಬಂಧಿಸಲಾಗಿದೆ. ಪೂರ್ಣ ವರದಿ ಸಲ್ಲಿಸಿದ ನಂತರ ಏನಾಯಿತು ಎಂದು ನಿಖರವಾಗಿ ತಿಳಿಯುತ್ತದೆ ಎಂದರು.