ಚಿಕ್ಕಮಗಳೂರು: ಕುಡಿತಕ್ಕೆ ದಾಸನಾಗಿದ್ದ ತಂದೆಯೇ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತನನ್ನು 29 ವರ್ಷದ ಪ್ರದೀಪ್ ಆಚಾರ್ ಎಂದು ಗುರುತಿಸಲಾಗಿದೆ. ಕೊಲೆ ಆರೋಪಿ ರಮೇಶ್ ಆಚಾರ್ ದಿನ ಕುಡಿದು ಬರುತ್ತಿದ್ದನು. ಹೀಗಾಗಿ ಅಪ್ಪ ಹಾಗೂ ಮಗನ ನಡುವೆ ಆಗಾಗ ಜಗಳವಾಗುತ್ತಿತ್ತು. ತಡ ರಾತ್ರಿ ಕುಡಿದು ಬಂದು ಜಗಳವಾಡಿದ್ದ ರಮೇಶ್ ಆಚಾರ್ ಮಗನ ಮೇಲೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಮಗ ರಕ್ತದ ಮಡುವಲ್ಲಿ ರಾತ್ರಿಯಿಡಿ ಪರದಾಡಿ ಮೃತಪಟ್ಟಿದ್ದನು. ಬೆಳಗ್ಗೆ ಮೃತಪಟ್ಟಿದ್ದ ಮಗನ ಶವವನ್ನು ಮನೆಯಿಂದ ಹೊರಗೆಳೆದು ತಂದು ಬಿಸಾಡಿದ ನಂತರ ಕೊಲೆ ವಿಷಯ ಗೊತ್ತಾಗಿದೆ. ಸ್ಥಳಕ್ಕಾಗಮಿಸಿದ ಬಾಳೂರು ಠಾಣೆ ಪೊಲೀಸರು ಆರೋಪಿ ತಂದೆಯನ್ನು ಬಂಧಿಸಿದ್ದಾರೆ.