ಬೆಂಗಳೂರು: ಭಾನುವಾರ ರಾತ್ರಿ ಜೆಜೆ ನಗರದಲ್ಲಿ ನಡೆದ ಧಾರ್ಮಿಕ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಓಂ ಶಕ್ತಿ ಭಕ್ತರ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ, 21 ವರ್ಷದ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದ್ದು ಪರಿಸ್ಥಿತಿ ಉದ್ವಿಗ್ನಗೊಂಡಿದೆ.
ಜಗಜೀವನರಾಮ್ (ಜೆಜೆ) ನಗರದ ವಿಎಸ್ ಗಾರ್ಡನ್‌ನಲ್ಲಿರುವ ಓಂ ಶಕ್ತಿ ದೇವಸ್ಥಾನದ ಬಳಿ ರಾತ್ರಿ 8.10 ಕ್ಕೆ ಭಕ್ತರು ಮೆರವಣಿಗೆಯ ಭಾಗವಾಗಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಲ್ಲು ತೂರಾಟದ ಬೆನ್ನಲ್ಲೇ, ಕೆರಳಿದ ಮಾಲಾಧಾರಿಗಳು ಜೆಜೆ ನಗರ ಪೊಲೀಸ್ ಸ್ಟೇಷನ್ ಬಳಿಯೇ ಜಮಾವಣೆಗೊಂಡು ಪ್ರತಿಭಟನೆ ನಡೆಸಿದ್ದಾರೆ. ಅನ್ಯ ಕೋಮಿನವರು ಬೇಕಂದೇ ಕಲ್ಲೆಸೆದಿದ್ದಾರೆ. ಕಿಡಿಗೇಡಿಗಳನ್ನ ಬಂಧಿಸಿ. ಪ್ರತಿ ದಿನ ಭಯದಲ್ಲೇ ಜೀವನ ನಡೆಸುತ್ತಿದ್ದೇವೆ. ನಮ್ಮ ಏರಿಯಾಗೂ ಅವರ ಏರಿಯಾ ನಡುವೆ ಗೋಡೆ ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾವುದೇ ರೀತಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಎರಡು ತುಕಡಿಗಳನ್ನು ಪ್ರದೇಶದಲ್ಲಿ ನಿಯೋಜಿಸಲಾಗಿತ್ತು.
ದೇವಾಲಯದ ಎದುರು ಭಾಗದಿಂದ ಕಲ್ಲು ತೂರಾಟ ನಡೆಸಲಾಗಿದೆ ಎಂದು ಗಾಯಗೊಂಡ ಮಹಿಳೆಯ ತಂದೆ ಹೇಳಿದ್ದಾರೆ. ಕತ್ತಲಾದ್ದರಿಂದ ಕಲ್ಲು ತೂರಾಟ ಮಾಡಿದವರನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಘಟನೆಯಿಂದ ತಮ್ಮ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಭಕ್ತರು ಹೇಳಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಹಾಗೂ ಪೊಲೀಸ್ ಠಾಣೆಯ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಶಶಿಕುಮಾರ್ (43) ಸಲ್ಲಿಸಿದ ದೂರಿನ ಪ್ರಕಾರ, ರಾತ್ರಿ 8.15 ರ ಸುಮಾರಿಗೆ ಭಕ್ತರು ಪೂಜೆಯಲ್ಲಿ ತೊಡಗಿದ್ದರು. ಪಂಚಮುಖಿ ನಾಗದೇವತಾ ದೇವಸ್ಥಾನದ ಬಳಿ ಭಕ್ತರ ಮೆರವಣಿಗೆ ಹೋಗುತ್ತಿದ್ದಾಗ, ಮೂರರಿಂದ ನಾಲ್ಕು ಯುವಕರು ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಮೆರವಣಿಗೆಯಲ್ಲಿದ್ದ ಒಬ್ಬಮಹಿಳೆ ತಲೆಗೆ ತೀವ್ರ ಗಾಯವಾಗಿ ರಕ್ತಸ್ರಾವವಾಗಲು ಪ್ರಾರಂಭಿಸಿತು. ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಹಿಂದೆಯೂ ಇಂತಹ ಘಟನೆಗಳು ನಡೆದಿವೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿಂದೆ ಎರಡು ಅಥವಾ ಮೂರು ಸಂದರ್ಭಗಳಲ್ಲಿ ಧಾರ್ಮಿಕ ಆಚರಣೆಗಳ ಸಮಯದಲ್ಲಿ ಬೆಂಕಿ ಹಚ್ಚಲಾಗಿತ್ತು. ಓಂ ಶಕ್ತಿ ಮತ್ತು ಅಯ್ಯಪ್ಪ ಸ್ವಾಮಿ ಭಕ್ತರು ಒಟ್ಟಾಗಿ ದೂರು ಸಲ್ಲಿಸಿದ್ದು, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಮತ್ತು ದಲಿತರ ವಿರುದ್ಧ ದೌರ್ಜನ್ಯ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.