ಬೆಂಗಳೂರು: ಕೋಗಿಲು ಗ್ರಾಮದ ಸರ್ವೆ ನಂಬರ್ 99ರಲ್ಲಿ ಅಕ್ರಮವಾಗಿ ಮನೆ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟು ಹಣ ವಸೂಲಿ ಮಾಡಿದ ಆರೋಪದ ಮೇಲೆ ನಾಲ್ವರ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
ಆರೋಪಿಗಳಾದ ಮುನಿ ಆಂಜಿನಪ್ಪ ಮತ್ತು ರಾಬಿನ್ ಹಾಗೂ ಇನ್ನಿತರಾದ ವಾಸೀಂ ಉಲ್ಲಾ ಬೇಗ್ ಮತ್ತು ವಿಜಯ್ ಅವರನ್ನು ಬಂಧಿಸಲಾಗಿದೆ ಎಂದು ಈಶಾನ್ಯ ಡಿಸಿಪಿ ಜಿ ಕೆ ಮಿಥುನ್ ಕುಮಾರ್ ತಿಳಿಸಿದ್ದಾರೆ. ಜನವರಿ 4 ರಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್‌ನ (ಬಿಎಸ್‌ಡಬ್ಲ್ಯುಎಂಎಲ್) ಹಿರಿಯ ಇಂಜಿನಿಯರ್ ಸಂತೋಷ್ ಕಡ್ಡಿ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲುವಿನ ಫಕೀರ್ ಲೇಔಟ್‌ನಲ್ಲಿ ಸರ್ಕಾರಿ ಭೂಮಿಯನ್ನು ಮೋಸದಿಂದ ಮಾರಾಟ ಮಾಡಿ ಅನಧಿಕೃತವಾಗಿ ಮನೆ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
14.36 ಎಕರೆ ವಿಸ್ತೀರ್ಣದ ಭೂಮಿಯನ್ನು 2015 ರಲ್ಲಿ ಹಿಂದಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗೆ ವರ್ಗಾಯಿಸಲಾಗಿತ್ತು. ಅಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ನಿರ್ಮಾಣ ಮಾಡಲು ಬಿಬಿಎಂಪಿ ಬಯಸಿತ್ತು. ಈ ಸಂಬಧ 2023ರಲ್ಲಿ ಕಾಮಗಾರಿ ಆದೇಶ ನೀಡಲಾಗಿತ್ತು. ಸ್ಥಳ ಪರಿಶೀಲನೆ ನಡೆಸುತ್ತಿದ್ದಾಗ ಅಲ್ಲಿ ಅಕ್ರಮವಾಗಿ ಮನೆ ನಿರ್ಮಾಣವಾಗಿರುವುದು ಕಂಡುಬಂದಿದೆ.
ವಿಜಯ್, ವಾಸೀಂ, ಮುನಿ ಆಂಜಿನಪ್ಪ ಮತ್ತು ರಾಬಿನ್ ಅವರು ಜನರಿಂದ ಹಣ ಪಡೆದು ಅನಧಿಕೃತ ಮನೆಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಸಹಾಯ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆರೋಪಿಗಳಿಗೆ ಲಕ್ಷಗಟ್ಟಲೆ ಹಣ ನೀಡಿರುವುದಾಗಿ ನಿವಾಸಿಗಳು ನೀಡಿದ ಹೇಳಿಕೆ ಆಧರಿಸಿ ದೂರು ನೀಡಲಾಗಿದೆ. ಈ ಸಂಬಂಧ ವಿವರಣೆ ಕೋರಿ ವಾಸೀಂಗೆ ನೋಟಿಸ್ ಕಳುಹಿಸಿದ್ದೇವೆ ಎಂದು BWSML ಹೇಳಿದೆ.
ಆದರೆ ತನಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ವಾಸೀಂ TNIE ಗೆ ತಿಳಿಸಿದ್ದಾರೆ. ಆರೋಪಿಗಳು ಸಮೀಪದ ಪ್ರದೇಶಗಳ ಸರ್ವೆ ನಂಬರ್‌ಗಳನ್ನು ತೋರಿಸಿ ಕೋಗಿಲು ತ್ಯಾಜ್ಯ ಸುರಿಯುವ ಸ್ಥಳಗಳನ್ನು ಬಡ ನಿವಾಸಿಗಳಿಗೆ ರವಾನಿಸಿರಬಹುದು ಎಂದು BWSML ಹೇಳಿದೆ. ಇದರ ಹಿಂದೆ ದೊಡ್ಡ ಭೂಕಬಳಿಕೆ ಜಾಲವಿದೆಯೇ ಎಂಬುದನ್ನು ಕೂಲಂಕುಷ ತನಿಖೆಯಿಂದ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.