ಅಕಾಲಿಕ ಮರಣ ಹೊಂದಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬದುಕು, ಸಮಾಜಸೇವೆ, ಸಿನಿಮಾಗಳ ಕುರಿತು ಶಾಲಾ ಪಠ್ಯಕ್ರಮದಲ್ಲಿ ಪಾಠ ಸೇರಿಸಬೇಕೆಂದು ಅವರ ಅಭಿಮಾನಿಗಳು ಬೇಡಿಕೆ ನೀಡುತ್ತಲೇ ಬಂದಿದ್ದರು.
ಮುಂಬರುವ ಪಠ್ಯಪುಸ್ತಕ ತಯಾರಿ ಅಥವಾ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಸಾಧನೆಗಳ ಪಾಠಗಳನ್ನು ಸೇರಿಸುವ ಪ್ರಸ್ತಾಪವನ್ನು ಪರಿಗಣಿಸುವುದಾಗಿ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ದೃಢಪಡಿಸಿದೆ. ಅಸಾಧಾರಣ ಬಾಲನಟನಿಂದ ಲೋಕೋಪಕಾರಿ ಮತ್ತು ಮೌಲ್ಯಗಳಿಗೆ ಹೆಸರುವಾಸಿಯಾದ ಸಾಮಾಜಿಕ ಪ್ರಜ್ಞೆಯ ವ್ಯಕ್ತಿಯಾಗುವ ಅವರ ಬದುಕಿನ ಪಯಣ ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುವ ರೀತಿ ಇದ್ದು ಅದನ್ನು ಮಕ್ಕಳಿಗೆ ಸೇರಿಸಿದರೆ ಉತ್ತಮ ಎಂಬ ನಿರ್ಧಾರಕ್ಕೆ ಪಠ್ಯಪುಸ್ತಕ ಸೊಸೈಟಿ ಬಂದಿದೆ.
ಈ ಪ್ರಸ್ತಾವನೆಯನ್ನು ಅಭಿಮಾನಿಯೊಬ್ಬರು ಆರಂಭಿಸಿ ನಂತರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವರು ಮುಂದಿಟ್ಟರು.
26 ಅನಾಥಾಶ್ರಮಗಳು, 16 ವೃದ್ಧಾಶ್ರಮಗಳು, 19 ಗೋಶಾಲೆಗಳು ಮತ್ತು 4,800 ಕ್ಕೂ ಹೆಚ್ಚು ಹಿಂದುಳಿದ ಮಕ್ಕಳಿಗೆ ಆರ್ಥಿಕ ನೆರವು ಸೇರಿದಂತೆ ಪುನೀತ್ ರಾಜ್‌ಕುಮಾರ್ ತಮ್ಮ ವ್ಯಾಪಕ ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದ್ದರು.
ಅವರ ಅಂತಿಮ ಲೋಕೋಪಕಾರವೆಂದರೆ ಅವರ ಮರಣದ ನಂತರ ಅವರ ಕಣ್ಣುಗಳನ್ನು ದಾನ ಮಾಡಿದ್ದು, ಅನೇಕರನ್ನು ಪ್ರೇರೇಪಿಸಿದೆ.
ದಿವಂಗತ ನಟನ ತಂದೆ, ದಂತಕಥೆ ಡಾ. ರಾಜ್‌ಕುಮಾರ್ ಅವರ ಜೀವನ ಮತ್ತು ಕೊಡುಗೆಗಳ ಬಗ್ಗೆ ಆರನೇ ತರಗತಿಯ ಪ್ರಥಮ ಭಾಷೆಯ ಕನ್ನಡ ಪಠ್ಯಪುಸ್ತಕದಲ್ಲಿ ಈಗಾಗಲೇ ಪಾಠವಿದೆ. ಇದೀಗ ಪುತ್ರನ ಕುರಿತ ಪಠ್ಯವನ್ನು ಕೂಡ ಸೇರಿಸಲಾಗುತ್ತಿದ್ದು, ಯಾವ ತರಗತಿಯಲ್ಲಿ ಎಂಬುದು ನಿರ್ಧಾರವಾಗಿಲ್ಲ.
ಪುನೀತ್ ಪತ್ನಿ ಹರ್ಷ
ಪುನೀತ್ ರಾಜ್‌ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಮನ್ನಣೆಗೆ ಸಂತೋಷ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಇದು ಅವರ ನಟನಾ ವೃತ್ತಿಜೀವನವನ್ನು ಮೀರಿ ಅವರು ಯಾವ ರೀತಿಯ ವ್ಯಕ್ತಿ ಎಂದು ಮಕ್ಕಳು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಈ ಗೌರವ ತಮಗೆ ಸಂತೋಷ ಮತ್ತು ಕೃತಜ್ಞತೆಯನ್ನು ತಂದಿದೆ. ನನಗೆ ನಿಜಕ್ಕೂ ಸಂತೋಷ ಮತ್ತು ಹರ್ಷವಾಗಿದೆ. ನನ್ನ ಪತಿ ಮತ್ತು ನನ್ನ ಕುಟುಂಬಕ್ಕೆ ಈ ವಿಶಿಷ್ಟ ಗೌರವಕ್ಕಾಗಿ ಕರ್ನಾಟಕ ಸರ್ಕಾರಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಈ ಸುದ್ದಿಯನ್ನು ತಮ್ಮ ಮಕ್ಕಳೊಂದಿಗೆ ಹಂಚಿಕೊಳ್ಳುವುದು ಅಶ್ವಿನಿಯವರಿಗೆ ಭಾವನಾತ್ಮಕ ಕ್ಷಣವಾಗಿತ್ತು. ಇದು ಅವರ ತಂದೆಗೆ ಸಿಕ್ಕ ದೊಡ್ಡ ಗೌರವ ಮತ್ತು ಮನ್ನಣೆ ಎಂದು ನಮ್ಮ ಮಕ್ಕಳು ಅರ್ಥಮಾಡಿಕೊಳ್ಳುತ್ತಾರೆ. ಎಲ್ಲರಿಗೂ ಈ ರೀತಿಯ ಗೌರವ ಸಿಗುವುದಿಲ್ಲ. ಸಿನಿಮಾದಲ್ಲಿ ಅಭಿನಯ ಬೇರೆ, ಆದರೆ ಕಲಾವಿದರೊಬ್ಬರ ಕುರಿತು ಶೈಕ್ಷಣಿಕ ಕ್ಷೇತ್ರದಲ್ಲಿ ನೆನಪಿಸಿಕೊಳ್ಳುವುದು ವಿಭಿನ್ನವೆನಿಸುತ್ತದೆ ಎಂದು ಅವರು ಹೇಳಿದರು.
ಪುನೀತ್ ರಾಜ್‌ಕುಮಾರ್ ಅವರ ಜೀವನವನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸುವ ಪ್ರಸ್ತಾಪವು 2022ರಲ್ಲಿಯೇ ಬಂದಿತ್ತು. ಆಗ ಟಿ ನರಸೀಪುರದ ಅಭಿಮಾನಿಯೊಬ್ಬರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು.