ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಐಶಾರಾಮಿ ಕಾರು ಅಪಘಾತ ಸಂಭವಿಸಿದ್ದು, ಕಾರು ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗುರುವಾರ ರಾತ್ರಿ ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಐಶಾರಾಮಿ ಕಾರು ವಿಭಜಕಕ್ಕೆ ಢಿಕ್ಕಿಯಾಗಿ ಮೇಲಕ್ಕೆ ಹಾರಿ ರೆಸ್ಟೋರೆಂಟ್ ಗೋಡೆಗೆ ಡಿಕ್ಕಿ ಹೊಡೆದಿದೆ.
ಇದೇ ಸಂದರ್ಭದಲ್ಲಿ ಅದೇ ಜಾಗದಲ್ಲಿ ಹಲವರು ನಿಂತಿದ್ದರು. ಆದರೆ ಪವಾಡ ಸದೃಶರಾಗಿ ಎಲ್ಲರೂ ಪಾರಾಗಿದ್ದಾರೆ. ಆ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ.
ರಾತ್ರಿ 11.35 ರ ಸುಮಾರಿಗೆ ಈ ಘಟನೆ ನಡೆದಿದ್ದು, ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಪೊಲೀಸರ ಪ್ರಕಾರ, ಸ್ಕೋಡಾ ಮಾದರಿಯ ಕಾರನ್ನು 42 ವರ್ಷದ ಡೆರಿಕ್ ಟೋನಿ ಎಂಬುವವರು ಚಲಾಯಿಸುತ್ತಿದ್ದರು.
ಟೋನಿ 18 ನೇ ಮುಖ್ಯ ರಸ್ತೆಯಿಂದ 100 ಅಡಿ ರಸ್ತೆಯ ಕಡೆಗೆ ಪ್ರಯಾಣಿಸುತ್ತಿದ್ದರು. ಮದ್ಯದ ಅಮಲಿನಲ್ಲಿದ್ದ ಟೋನಿ ಅತಿ ವೇಗದಲ್ಲಿ ಕಾರು ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?
ಟೋನಿ ಎಡ ತಿರುವು ಪಡೆಯಲು ವಿಫಲರಾಗಿದ್ದು, ಈ ವೇಳೆ ಕಾರು ನೇರವಾಗಿ ವಿಭಜಕಕ್ಕೆ ಢಿಕ್ಕಿಯಾಗಿದೆ. ಢಿಕ್ಕಿಯಾದ ರಭಸಕ್ಕೆ ಕಾರು ಗಾಳಿಯಲ್ಲಿ ಮೇಲಕ್ಕೆ ಹಾರಿದ್ದು, ಬಳಿಕ ಕೆಳಗೆ ಬಿದ್ದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ನಂತರ ಬಾರ್ಬೆಕ್ಯೂ ನೇಷನ್ ಅಂಗಡಿಗೆ ಡಿಕ್ಕಿ ಹೊಡೆದು ರೆಸ್ಟೋರೆಂಟ್‌ನ ಗೋಡೆಗೆ ಗುದ್ದಿದೆ.
ವೈರಲ್ ಆಗಿರುವ 10 ಸೆಕೆಂಡ್ ಗಳ ವಿಡಿಯೋದಲ್ಲಿ ಭೋಜನ ಮುಗಿಸಿದ ಜನರ ಗುಂಪು ಅದೇ ಹೋಟೆಲ್ ಹೊರಗೆ ನಿಂತಿತ್ತು. ಅದೇ ಸಂದರ್ಭದಲ್ಲಿ ಈ ಕಾರು ಅತಿ ವೇಗದಲ್ಲಿ ಬಂದು, ವಿಭಜಕಕ್ಕೆ ಢಿಕ್ಕಿಯಾಗಿ ಮೇಲಕ್ಕೆ ಹಾರಿ, ಪಾದಚಾರಿಗಳಿಂದ ಕೂದಲೆಳೆ ಅಂತರದಿಂದ ಸಾಗಿ ರೆಸ್ಟೋರೆಂಟ್ ಗೋಡೆಗೆ ಡಿಕ್ಕಿ ಹೊಡೆದಿರುವುದು ದಾಖಲಾಗಿದೆ.
ಸಾವು ಸಂಭವಿಸಿಲ್ಲ
ಭೀಕರ ಅಪಘಾತದ ಹೊರತಾಗಿಯೂ ಅಪಘಾತದಲ್ಲಿ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ. ರೆಸ್ಟೋರೆಂಟ್ ಹೊರಗೆ ನಿಂತಿದ್ದ ಜನರ ಗುಂಪು ಯಾವುದೇ ಗಾಯಗಳಿಲ್ಲದೆ ಪವಾಡ ಸದೃಶ ಪಾರಾಗಿದ್ದು, ದ್ವಿಚಕ್ರ ವಾಹನದ ಚಾಲಕನಿಗೆ ಮಾತ್ರ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುವನ್ನು ಜಬೀರ್ ಅಹ್ಮದ್ ಎಂದು ಗುರುತಿಸಲಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಸ್ತುತ ಈ ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ಜೀವನ್ ಭೀಮಾ ನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.