ಬೆಂಗಳೂರು: ಫೆಬ್ರವರಿ 1 ರಂದು ಮಂಡಿಸಲಾಗುವ 2026-27ರ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯಕ್ಕೆ ಸಾಕಷ್ಟು ಅನುದಾನ ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವ ಮೂಲಕ ಹಣಕಾಸು ಸಮತೋಲನವನ್ನು ಪುನಃಸ್ಥಾಪಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒತ್ತಾಯಿಸಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಶನಿವಾರ ನವದೆಹಲಿಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಭಾಗಿಯಾಗಿದ್ದು, ಈ ವೇಳೆ ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಟ್ಟಿದ್ದಾರೆ.
ರಾಷ್ಟ್ರ ಅಭಿವೃದ್ಧಿಯಲ್ಲಿ ಕರ್ನಾಟಕ ದೊಡ್ಡ ಕೊಡುಗೆ ನೀಡುತ್ತಿದೆ. ಆದರೆ, ಜಿಎಸ್ಟಿ ದರ ಬದಲಾವಣೆ, ಹವಾಮಾನ ವೈಪರೀತ್ಯ, ಹೆಚ್ಚುತ್ತಿರುವ ಸಾಮಾಜಿಕ ಬದ್ಧತೆ ಹಾಗೂ ವೇಗದ ನಗರೀಕರಣದಿಂದ ಹಣಕಾಸು ಸ್ಥಿತಿ ಸಂಕೀರ್ಣಗೊಳ್ಳುತ್ತಿದೆ. ರಾಜ್ಯಗಳ ಹೊಣೆಗಾರಿಕೆಗಳು ಅವುಗಳ ಆದಾಯಗಳಿಗಿಂತ ವೇಗವಾಗಿ ವಿಸ್ತರಿಸಿಕೊಂಡಿದ್ದು, 2026-27 ಬಜೆಟ್‌ನಲ್ಲಿ ಸರಿಯಾದ ಹಣಕಾಸು ಉಪಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಎಸ್ಟಿ ಸರಳೀಕರಣದ ಬಳಿಕ ಕರ್ನಾಟಕದ ಜಿಎಸ್ಟಿ ಬೆಳವಣಿಗೆ ಶೇ.12 ದಿಂದ ಶೇ.5ಕ್ಕೆ ಇಳಿಕೆಯಾಗಿದೆ. ಇದರಿಂದ ಈ ವರ್ಷ ಸುಮಾರು 5,000 ಕೋಟಿ ಕೊರತೆಯಾಗಿದ್ದು, ವಾರ್ಷಿಕ 9,000 ಕೋಟಿ ಆದಾಯ ಕೊರತೆಯಾಗಲಿದೆ. ಕೇಂದ್ರ ಸರ್ಕಾರ ಪಾನ್ ಮಸಾಲ ಮೇಲಿನ ಸೆಸ್ ಮತ್ತು ತಂಬಾಕು ಮೇಲಿನ ಸುಂಕದ ಮೂಲಕ ತನ್ನ ನಷ್ಟವನ್ನು ಹೊಂದಿಸಿಕೊಂಡಿದೆ. ಆದರೆ, ರಾಜ್ಯಗಳಿಗೆ ಆ ಅವಕಾಶ ಇಲ್ಲದಾಗಿದೆ. ಹೀಗಾಗಿ ರಾಜ್ಯಗಳಿಗೆ ಸದೃಢ ಆದಾಯ ರಕ್ಷಣೆ ವ್ಯವಸ್ಥೆ ಕಲ್ಪಿಸಬೇಕು. ಆದಾಯ ನಷ್ಟಕ್ಕೆ ಸಂಪೂರ್ಣ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ತಂಬಾಕು ಮೇಲೆ ವಿಧಿಸಲಾಗುವ ಸುಂಕ ಹಾಗೂ ಪಾನ್ ಮಸಾಲದ ಮೇಲಿನ ಸೆಸ್ ಅನ್ನು 50:50 ಅನುಪಾತದಲ್ಲಿ ಹಂಚಿ, ಒಕ್ಕೂಟ ಸಹಕಾರ ಮತ್ತು ವಿತ್ತೀಯ ಸಮಾನತೆಯನ್ನು ಮರುಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಜಲಜೀವನ ಮಿಷನ್ ಯೋಜನೆಯ ಕೇಂದ್ರದ ಪಾಲಿನ ಬಾಕಿ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಕೇಂದ್ರ ಸರ್ಕಾರ ಯೋಜನೆಯಡಿ ಈವರೆಗೆ 11,786 ಕೋಟಿ ಹಣ ಬಿಡುಗಡೆ ಮಾಡಿದ್ದರೆ, ರಾಜ್ಯ ಸರ್ಕಾರ 24,598 ಲೋಟಿ ರೂ. ಹಣ ಬಿಡುಗಡೆ ಮಾಡಿದೆ. ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗದಂತೆ ರಾಜ್ಯ ಸರ್ಕಾರ ಮುಂಗಡವಾಗಿ ಹೆಚ್ಚುವರಿ 13,004 ಕೋಟಿ ರೂ. ಬಿಡುಗಡೆ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ.
ಬೇಡಿಕೆ ಆಧಾರಿತ MGNREGAಯಿಂದ ಅನುದಾನ ಹಂಚಿಕೆ-ಆಧಾರಿತ G-RAM-G ಗೆ ಬದಲಾಯಿಸುವುದರಿಂದ ಪರಿಣಾಮಕಾರಿ ಉದ್ಯೋಗ ದಿನಗಳು ಕಡಿಮೆಯಾಗಿವೆ. ಇದರಿಂದಾಗಿ 13 ಕೋಟಿ ಮಾನವ ದಿನಗಳ ಜೀವನೋಪಾಯ ಭದ್ರತೆಯನ್ನು ಒದಗಿಸುವುದನ್ನು ಮುಂದುವರಿಸಲು, ಕರ್ನಾಟಕಕ್ಕೆ ಸುಮಾರು 2,000 ಕೋಟಿ ರೂ.ಗಳು ಬೇಕಾಗುತ್ತವೆ. ಇದನ್ನು ಒದಗಿಸಲು ವಿತ್ತೀಯ ಅವಕಾಶವಿರುವುದಿಲ್ಲ. ಅಲ್ಲದೆ, G-RAM-G ಯೋಜನೆಯಲ್ಲಿ ರಾಜ್ಯಗಳು ಕೂಡಾ ಅನುದಾನ ಹಂಚಿಕೆ ಮಾಡಬೇಕಾಗಿದ್ದು, ರಾಜ್ಯದ ಹೊರೆಯನ್ನು ಇದು ಹೆಚ್ಚಿಸಿದೆ. ಆದ್ದರಿಂದ ಯೋಜನಾ ವಿನ್ಯಾಸವನ್ನು ಮರುಪರಿಶೀಲಿಸಿ, ಬೇಡಿಕೆ ಆಧಾರಿತ ಉದ್ಯೋಗ ವ್ಯವಸ್ಥೆಯನ್ನು ಪುನಃ ಸ್ಥಾಪಿಸಿ, ಸಮರ್ಪಕ ಮತ್ತು ಮಿತಿರಹಿತ ಕೇಂದ್ರ ಅನುದಾನ ಒದಗಿಸುವಂತೆ ಮನವಿ ಮಾಡಿದ್ದಾರೆ.
ಅನೇಕ ಬೆಳೆಗಳಲ್ಲಿ ಕಡಿಮೆ ಖರೀದಿ ಮತ್ತು ಕೊಳೆಯುವಿಕೆಯಿಂದಾಗಿ ಕನಿಷ್ಠ ಬೆಂಬಲ ಬೆಲೆ (MSP) ಖರೀದಿ ಸಾಕಷ್ಟು ಪರಿಣಾಮಕಾರಿಯಾಗಿಲ್ಲ. ಮೆಕ್ಕೆಜೋಳ, ಸೋಯಾಬೀನ್, ಮಾವು, ಮೆಣಸಿನಕಾಯಿ, ಈರುಳ್ಳಿ, ಟೊಮೇಟೊ, ಅರಿಶಿನ ಮತ್ತು ಶುಂಠಿ ಸೇರಿದಂತೆ 8 ಬೆಳೆಗಳಿಗೆ PDPS ಜಾರಿಗೆ ಕರ್ನಾಟಕವು ಪ್ರಸ್ತಾಪಿಸಿದ್ದು, 2026–27ರಲ್ಲಿ ಸಮಯೋಚಿತ ಅನುಷ್ಠಾನಕ್ಕಾಗಿ PM-AASHA ಅಡಿಯಲ್ಲಿ ರೂ. 796 ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದ್ದಾರೆ.
ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರಿಗೆ ಕೇಂದ್ರ ಸರ್ಕಾರ ನೀಡುವ ಗೌರವಧನವು ಹಲವು ವರ್ಷಗಳಿಂದ ಹೆಚ್ಚಳವಾಗಿರುವುದಿಲ್ಲ. ಆದ್ದರಿಂದ ಕೇಂದ್ರ ಪಾಲನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ರೂ. 8,000, ಅಡುಗೆ ಸಿಬ್ಬಂದಿ ಮತ್ತು ಸಹಾಯಕಿಯರಿಗೆ ತಿಂಗಳಿಗೆ ರೂ. 5,000, ರಾಷ್ಟ್ರೀಯ ಸಾಮಾಜಿಕ ಭದ್ರತಾ ಕಾರ್ಯಕ್ರಮದ (NSAP) ವ್ಯಾಪ್ತಿಯನ್ನು ಒಟ್ಟು ಅರ್ಹ ಫಲಾನುಭವಿಗಳ ಶೇ.50ಕ್ಕೆ ವಿಸ್ತರಿಸಿ, ಪಿಂಚಣಿ ಮೊತ್ತವನ್ನು ಹೆಚ್ಚಿಸುವಂತೆ ವಿನಂತಿಸಲಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಲು ಮತ್ತು 2023-24 ಕೇಂದ್ರ ಆಯವ್ಯಯದಲ್ಲಿ ಘೋಷಿಸಿದಂತೆ ರೂ. 5,300 ಕೋಟಿ ಕೇಂದ್ರ ಸಹಾಯವನ್ನು ಬಿಡುಗಡೆ ಮಾಡಲು ವಿನಂತಿಸಲಾಗಿದೆ.
15ನೇ ಹಣಕಾಸು ಆಯೋಗದ ಬಾಕಿ ಅನುದಾನ ಮತ್ತು ವಿಪತ್ತು ಪರಿಹಾರ ಮೊತ್ತಗಳನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ವಿನಂತಿಸಿದ್ದಾರೆ.
ವಿಶೇಷ ಅನುದಾನ ರೂ. 5,495 ಕೋಟಿ, ರಾಜ್ಯ ಕೇಂದ್ರಿತ ಅನುದಾನ ರೂ. 6,000 ಕೋಟಿ, 15ನೇ ಹಣಕಾಸು ಆಯೋಗದ ಅನುದಾನ ಕೊರತೆ ರೂ. 4,044 ಕೋಟಿ ರೂ. ಇದೆ ಎಂದು ವಿವರಿಸಿದ್ದಾರೆ.
ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವು ಕಡಿಮೆ ಅಂಕ ಹೊಂದಿದ್ದು, ಇದನ್ನು ಉತ್ತಮಗೊಳಿಸಲು ವಾರ್ಷಿಕ ರೂ. 5,000 ಕೋಟಿ ಅನುದಾನವನ್ನು ಹೆಚ್ಚುವರಿಯಾಗಿ ಒದಗಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ವಿತ್ತೀಯ ಶಿಸ್ತು ಮತ್ತು ರಾಷ್ಟ್ರೀಯ ಬೆಳವಣಿಗೆಯತ್ತ ಕರ್ನಾಟಕದ ಬದ್ಧತೆಯನ್ನು ಪುನರುಚ್ಚರಿಸುತ್ತಾ, 2026–27ರ ಆಯವ್ಯಯದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಸಮತೋಲನವನ್ನು ಮತ್ತು ವಿಶ್ವಾಸವನ್ನು ಪುನಃ ಸ್ಥಾಪಿಸುವಂತೆ ಮನವಿ ಮಾಡಿದ್ದಾರೆ.