ಯಾದಗಿರಿ: ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಲ್ಲಿ ಕಳ್ಳಬಟ್ಟಿ ಸಾರಾಯಿ ಹಾಗೂ ಸೇಂದಿ ತಯಾರಿಕೆಗೆ ಬಳಸುವ ಸಿಎಚ್ ಪೌಡರ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಈ ಅಕ್ರಮಗಳಲ್ಲಿ ತೊಡಗಿರುವ ಆರೋಪಿಗಳಿಗೆ ಗಡಿಪಾರು ಕ್ರಮ ಕೈಗೊಳ್ಳಬೇಕೆಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಭಾನುವಾರ ಯಾದಗಿರಿ ನಗರದ ಅಬಕಾರಿ ಇಲಾಖೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಚಿವರು, ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು. ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಸೇಂದಿ, ಸಿಎಚ್ ಪೌಡರ್ ಬಳಸಿ ತಯಾರಿಸುವ ಸಾರಾಯಿ ಹಾಗೂ ಕಳ್ಳಬಟ್ಟಿ ದಂಧೆ ಹೆಚ್ಚಾಗಿ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಇವು ಮಾನವ ಆರೋಗ್ಯಕ್ಕೆ ಮಾರಕವಾಗಿದ್ದು, ಜನರ ಪ್ರಾಣಕ್ಕೂ ಅಪಾಯ ತಂದೊಡ್ಡುತ್ತಿವೆ ಎಂದರು.
ಅಕ್ರಮ ಸಾರಾಯಿ ಮತ್ತು ಸೇಂದಿ ಮಾರಾಟದಿಂದ ಜನರ ಆರೋಗ್ಯ ಹಾಳಾಗುವುದರ ಜೊತೆಗೆ ಸರ್ಕಾರಕ್ಕೆ ಭಾರೀ ತೆರಿಗೆ ನಷ್ಟ ಉಂಟಾಗುತ್ತಿದೆ. ಈ ವಿಚಾರವನ್ನು ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು. ಅಕ್ರಮ ತಡೆಯಲು ಅಧಿಕಾರಿಗಳು ಸದಾ ಅಲರ್ಟ್ ಆಗಿರಬೇಕು. ಈ ದಂಧೆಗಾರರಿಗೆ ಇಲಾಖೆಯ ಬಗ್ಗೆ ಭಯ ಇರಬೇಕು ಎಂದು ಎಚ್ಚರಿಕೆ ನೀಡಿದರು.
ಪೈಪ್ ಮೂಲಕ ಕಳ್ಳಬಟ್ಟಿ ಸಾರಾಯಿ ಮಾರಾಟ: ಸಭೆಯಲ್ಲಿ ಮಾತನಾಡಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು, ಯಾದಗಿರಿ ನಗರದಲ್ಲಿ ಕೆಲವು ಸ್ಥಳಗಳಲ್ಲಿ ಕಳ್ಳಬಟ್ಟಿ ಸಾರಾಯಿ ಹಾಗೂ ಸೇಂದಿಯನ್ನು ತಯಾರಿಸಿ ಬ್ಯಾರಲ್ ಗಳಲ್ಲಿ ಸಂಗ್ರಹಿಸಿ, ಟೆರಸ್ ಮೇಲೆ ಇಟ್ಟು ಪೈಪ್ ಮೂಲಕ ಮಾರಾಟ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಕುರಿತು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದಾಗ, ಅಂತಹ ಪ್ರಕರಣಗಳಿಲ್ಲ ಎಂಬ ಉತ್ತರ ಬಂದಿತು. ಇದರಿಂದ ಕೋಪಗೊಂಡ ಶಾಸಕರು, ನಾನು ಶಾಸಕರಾಗಿ ಹೇಳುತ್ತಿರುವುದು ಸುಳ್ಳೆ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ತಕ್ಷಣವೇ ಸಚಿವ ತಿಮ್ಮಾಪುರ ಅವರು ಪ್ರಕರಣ ಪತ್ತೆ ಹಚ್ಚಿ ಅಕ್ರಮವನ್ನು ನಿಲ್ಲಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪೌಡರ್ ಬಳಸಿ ಸಾರಾಯಿ ತಯಾರಿ: ಶಹಾಪುರ ತಾಲೂಕಿನ ಕೆಲವು ಹಳ್ಳಿಗಳಲ್ಲಿ, ವಿಶೇಷವಾಗಿ ವನದುರ್ಗದಲ್ಲಿ ಕೇವಲ ಒಂದು ಚಮಚ ಪೌಡರ್ ಮಿಶ್ರಣ ಮಾಡಿ ಸಾರಾಯಿ ತಯಾರಿಸಿ ಮಾರಾಟ ಮಾಡಲಾಗುತ್ತಿದೆ ಎಂದು ರಾಜ್ಯ ಮದ್ಯಪಾನ ಸ್ವಯಂ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಆರೋಪ ಮಾಡಿದರು.
ಇಂತಹ ಮದ್ಯ ಸೇವನೆಯಿಂದ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಅನಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸಬೇಕೆಂದು ಅವರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ತಿಮ್ಮಾಪುರ, ಅಧಿಕಾರಿಗಳಿಗೆ ಮತ್ತೊಮ್ಮೆ ಖಡಕ್ ಸೂಚನೆ ನೀಡಿ, ಯಾವುದೇ ಕಾರಣಕ್ಕೂ ಅಕ್ರಮಗಳಿಗೆ ಅವಕಾಶ ಕೊಡಬಾರದೆಂದು ಆದೇಶಿಸಿದರು.