ಬೆಂಗಳೂರು: ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಮಸೂದೆಯನ್ನು ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ.
ರೇಸ್ ಕೋರ್ಸ್ ರಸ್ತೆಯ KEB ಇಂಜಿನಿಯರ್ ಅಸೋಸಿಯೇಷನ್ ನಲ್ಲಿ ಕಾರ್ಯಕ್ರಮ ದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಮಾಧ್ಯಮ ಶಾಲೆಗಳಲ್ಲಿ, ವಿಶೇಷವಾಗಿ ಕಾಸರಗೋಡಿನಂತಹ ಗಡಿ ಜಿಲ್ಲೆಗಳಲ್ಲಿ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಕಡ್ಡಾಯಗೊಳಿಸುವ ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆಯಲಾಗಿದ್ದು, ಕಾಯ್ದೆ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ವಿಧೇಯಕ ಅಂಗೀಕಾರವಾದರೆ, ಭಾಷಾ ಅಲ್ಪಸಂಖ್ಯಾತರು ಮತ್ತು ದೇಶದ ಬಹುತ್ವದ ಚೈತನ್ಯವನ್ನು ರಕ್ಷಿಸುವ ಸಲುವಾಗಿ ರಾಜ್ಯಕ್ಕೆ ಲಭ್ಯವಿರುವ ಪ್ರತಿಯೊಂದು ಸಾಂವಿಧಾನಿಕ ಹಕ್ಕನ್ನು ಚಲಾಯಿಸುವ ಮೂಲಕ ಕರ್ನಾಟಕ ಅದನ್ನು ವಿರೋಧಿಸುತ್ತದೆ ಎಂದು ತಿಳಿಸಿದರು.
ಈ ಮಧ್ಯೆ, ಕೇರಳದ ಮಲೆಯಾಳಿ ಭಾಷಾ ಮಸೂದೆಯಿಂದ ಕಾಸರಗೋಡನ್ನು ಹೊರಗಿಡುವಂತೆ ಆ ರಾಜ್ಯದ ಮುಖ್ಯಮಂತ್ರಿಗಳನ್ನು ಒತ್ತಾಯಿಸುವುದರ ಜೊತೆಗೆ ರಾಷ್ಟ್ರಪತಿಯವರನ್ನು ಭೇಟಿ ಮಾಡಲು ನಿಯೋಗ ಕೊಂಡೊಯ್ಯುವಂತೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರು ಹಾಗೂ ಕಾಸರಗೋಡು ಕನ್ನಡಿಗರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.