ಬೆಂಗಳೂರು: ಇತ್ತೀಚೆಗೆ ರಿಲೀಸ್ ಆಗಿರುವ ನಟ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್‌ನಲ್ಲಿ ಅಶ್ಲೀಲ ದೃಶ್ಯಗಳಿದ್ದು, ಅದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಎಎಪಿ ಸೋಮವಾರ ರಾಜ್ಯ ಮಹಿಳಾ ಆಯೋಗಕ್ಕೆ(ಕೆಎಸ್‌ಡಬ್ಲ್ಯೂಸಿ)ಗೆ ದೂರು ನೀಡಿದೆ.
ಎಎಪಿಯ ರಾಜ್ಯ ಮಹಿಳಾ ಘಟಕದ ನಾಯಕರು ಇಂದು ರಾಜ್ಯ ಮಹಿಳಾ ಆಯೋಗದ ಅಧಿಕಾರಿಗಳನ್ನು ಭೇಟಿ ಮಾಡಿ 'ಟಾಕ್ಸಿಕ್' ಟೀಸರ್ ವಿರುದ್ಧ ದೂರು ನೀಡಿದ್ದು, ಆ ದೃಶ್ಯವನ್ನ ತೆಗೆದುಹಾಕುವಂತೆ ಮನವಿ ಮಾಡಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಕಚೇರಿಯಲ್ಲಿಲದ ಕಾರಣ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ ಆರ್ ಅವರಿಗೆ ದೂರು ನೀಡಲಾಗಿದೆ.
"ಈ ಚಿತ್ರದ ಟೀಸರ್‌ನಲ್ಲಿ ಕೆಲವು ದೃಶ್ಯಗಳು ಅಶ್ಲೀಲವಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಸಾಮಾಜಿಕ ಸ್ವಾಸ್ಥ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಯಾವುದೇ ವಯೋಮಾನದ ಎಚ್ಚರಿಕೆ ಇಲ್ಲದೆ ಸಾರ್ವಜನಿಕ ವಲಯದಲ್ಲಿ ಬಿಡುಗಡೆಯಾದ ಈ ದೃಶ್ಯಗಳು ಮಹಿಳೆಯರ ಘನತೆಯನ್ನು ಕುಗ್ಗಿಸುತ್ತವೆ ಮತ್ತು ಕನ್ನಡ ಸಂಸ್ಕೃತಿಯನ್ನು ಅವಮಾನಿಸುತ್ತವೆ" ಎಂದು ಎಎಪಿ ರಾಜ್ಯ ಕಾರ್ಯದರ್ಶಿ ಉಷಾ ಮೋಹನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
"ಸಮಾಜದ ಮೇಲೆ, ವಿಶೇಷವಾಗಿ ಅಪ್ರಾಪ್ತ ವಯಸ್ಕರ ಮೇಲೆ" ಪ್ರತಿಕೂಲ ಪರಿಣಾಮ ಬೀರುವ ಕಾರಣ, ಪಕ್ಷವು, ಆಯೋಗ ತಕ್ಷಣ ಮಧ್ಯಪ್ರವೇಶಿಸಿ ಟೀಸರ್ ಅನ್ನು ನಿಷೇಧಿಸಬೇಕು. ಇಲ್ಲವೇ ಅಶ್ಲೀಲ ದೃಶ್ಯಗಳನ್ನು ತೆಗೆದು ಹಾಕಬೇಕು ಮತ್ತು ಅದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕಲು ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ನಿರ್ದೇಶಿಸುವಂತೆ ಎಎಪಿ ಒತ್ತಾಯಿಸಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಟೀಸರ್ ಅನ್ನು ಜನವರಿ 8 ರಂದು ಯಶ್ ಅವರ 40ನೇ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಗಿದೆ.
ಮಾರ್ಚ್ 19 ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ನಯನತಾರಾ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.