ಡಿ.ಕೆ. ಶಿವಕುಮಾರ್ 
ರಾಜ್ಯ

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಎಷ್ಟು ಪ್ರಾಮಾಣಿಕವಾಗಿ ಇದ್ದೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೆ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದರು.

ಬೆಂಗಳೂರು: ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ. ಮುಂದೆಯೂ ನನ್ನ ಬಗ್ಗೆ ಪಕ್ಷದವರು ತೀರ್ಮಾನ ಮಾಡುತ್ತಾರೆ ಎಂಬ ನಂಬಿಕೆ, ಆತ್ಮವಿಶ್ವಾಸವಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಅರಮನೆ ಮೈದಾನದಲ್ಲಿ ಉದ್ಯಮಿ ಒಕ್ಕಲಿಗ ಎಕ್ಸ್ಪೋ 2026 ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಮಾತನಾಡಿದರು. ಅಧಿವೇಶನದಲ್ಲಿ ಒಮ್ಮೆ ಯಡಿಯೂರಪ್ಪ ಅವರಿಗೆ ಯಶಸ್ಸಿನ ಬಗ್ಗೆ ಒಂದು ಮಾತು ಹೇಳಿದ್ದೆ. ನಾವು ಬದುಕಿನಲ್ಲಿ ಯಶಸ್ಸು ಸಾಧಿಸಬೇಕಾದರೆ ನಮ್ಮಲ್ಲಿ ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಅರ್ಜುನನ ಗುರಿ, ವಿದುರನ ನೀತಿ, ಭೀಮನ ಬಲ, ಕೃಷ್ಣನ ತಂತ್ರ ಇರಬೇಕು. ಆಗ ಯಶಸ್ಸು ಸಾಧಿಸಲು ಸಾಧ್ಯ.

ನಾನು ರಾಜಕೀಯವಾಗಿ ಅನೇಕ ಏಟು ತಿಂದಿದ್ದೇನೆ. ಚಿನ್ನಕ್ಕೆ ಹೆಚ್ಚು ಶಾಖ ಕೊಟ್ಟು ಕರಗಿಸಿದಾಗ ಮಾತ್ರ ಆಭರಣ ಮಾಡಬಹುದು. ನೀವು ಯಾವತ್ತೂ ನಿಷ್ಪ್ರಯೋಜಕ, ಸಣ್ಣವ ಎಂದು ಭಾವಿಸಬೇಡಿ. ನೀವು ನಿಮ್ಮ ಕರ್ತವ್ಯ ಮಾಡಿ. ಯಾರು ಯಾವಾಗ ಬೇಕಾದರೂ ಏನಾದರೂ ಆಗಬಹುದು. ನಾನು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವನಲ್ಲ. ಆದರೂ ಈ ಮಟ್ಟಕ್ಕೆ ಬಂದಿದ್ದೇನೆ" ಎಂದು ಹೇಳಿದರು.

ರಾಜಕೀಯ ಮಾಡಿ ನನ್ನನ್ನು ಜೈಲಿಗೆ ಹಾಕಿದಾಗ, ನನಗಾಗಿ ಪ್ರಾರ್ಥನೆ ಮಾಡಿದಿರಿ, ಹರಕೆ ಕಟ್ಟಿಕೊಂಡಿದ್ದೀರಿ. ಈಗಲೂ ಅದನ್ನೇ ಮಾಡುತ್ತಿದ್ದೀರಿ ಎಂಬ ಅರಿವು ನನಗಿದೆ. ಪಕ್ಷತೀತವಾಗಿ, ಸಮುದಾಯತೀತವಾಗಿ ಜನ ನನಗೆ ಒಳ್ಳೆಯದು ಬಯಸುತ್ತಿದ್ದಾರೆ.

ನನ್ನ ಬಗ್ಗೆ ಬೇರೆಯವರಿಗಿಂತ ನಮ್ಮ ಸಮುದಾಯದ ಕೆಲವರೇ, ನಮ್ಮವರೇ ಅಸೂಯೆಯಿಂದ ಟೀಕೆ ಮಾಡುತ್ತಿದ್ದಾರೆ. ಹಿಂದೆಯಿಂದ, ಮುಂದೆಯಿಂದ ಚಾಕು ಹಾಕುತ್ತಿದ್ದಾರೆ. ರಾಜಕೀಯದಲ್ಲಿ ಇವೆಲ್ಲವೂ ಸಹಜ. ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು. ನಾವು ಪ್ರಾಮಾಣಿಕವಾಗಿ ಇರಬೇಕು. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಾನು ಎಷ್ಟು ಪ್ರಾಮಾಣಿಕವಾಗಿ ಇದ್ದೆ ಎಂಬುದು ನನ್ನ ಆತ್ಮಸಾಕ್ಷಿಗೆ ಗೊತ್ತು. ಆದರೆ ಕುಮಾರಸ್ವಾಮಿ ಅವರು ನನ್ನ ವಿರುದ್ಧ ಬೆನ್ನಿಗೆ ಚೂರಿ ಹಾಕಿದ ಆರೋಪ ಮಾಡಿದರು. ನನಗೆ ಯಾರ ಪ್ರಮಾಣಪತ್ರವೂ ಬೇಡ. ನನ್ನ ಆತ್ಮಸಾಕ್ಷಿಯನ್ನು ನಾನು ಮೆಚ್ಚಿಸಿದರೆ ಸಾಕು. ನೀವು ನಿಮ್ಮ ಸ್ವಾಭಿಮಾನ, ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ" ಎಂದು ಸಲಹೆ ನೀಡಿದರು.

ದೇವರು ವರ, ಶಾಪ ನೀಡುವುದಿಲ್ಲ. ಕೇವಲ ಅವಕಾಶ ನೀಡುತ್ತಾನೆ. ಆ ಅವಕಾಶ ಸಿಕ್ಕಾಗ ಶ್ರಮವಹಿಸಿ ಯಶಸ್ಸು ಸಾಧಿಸಬೇಕು. ಮನುಷ್ಯನಿಗೆ ನಂಬಿಕೆಗಿಂತ ದೊಡ್ಡ ಗುಣ ಮತ್ತೊಂದಿಲ್ಲ. ನೀವುಗಳು ನಿಮ್ಮ ವ್ಯವಹಾರದಲ್ಲಿ ನಂಬಿಕೆ ಉಳಿಸಿಕೊಳ್ಳಬೇಕು. ನೀವು ಯಾವುದೇ ಉದ್ಯಮ ನಡೆಸುತ್ತಿದ್ದರೂ ನಂಬಿಕೆ ಉಳಿಸಿಕೊಳ್ಳಿ. ಆಗ ಗ್ರಾಹಕರು ನಿಮ್ಮ ಬಳಿ ಬರುತ್ತಾರೆ. ನೀವು ನಂಬಿಕೆ ಮೂಲಕ ನಿಮ್ಮ ಬ್ರಾಂಡ್ ಹೆಚ್ಚಿಸಿಕೊಳ್ಳಬೇಕು" ಎಂದು ತಿಳಿಸಿದರು.

"ಉದ್ಯಮಿಗಳು ಸಾಲ ತಂದು ವ್ಯಾಪಾರ ಮಾಡಿ, ಬಡ್ಡಿ ಕಟ್ಟಿ, ಉದ್ಯೋಗಿಗಳಿಗೆ ವೇತನ ನೀಡಿ, ಜಿಎಸ್ ಟಿ ಕಟ್ಟಿ ಕೊನೆಗೆ ಉಳಿಯುವುದನ್ನು ಪಡೆಯುತ್ತೀರಿ. ನೀವು ಸರ್ಕಾರಕ್ಕೂ ಸಹಾಯ ಮಾಡುತ್ತೀರಿ. ಸಮಾಜಕ್ಕೂ ಸಹಾಯ ಮಾಡುತ್ತಿದ್ದೀರಿ. ಇಷ್ಟು ಧೈರ್ಯ ಮಾಡಿ ಉದ್ಯಮಿಗಳಾಗಿ ಶ್ರಮ ವಹಿಸುತ್ತಿರುವ ನಿಮ್ಮ ಜೊತೆ ನಾನಿದ್ದೇನೆ ಎಂದು ಹೇಳಲು ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ" ಎಂದರು.

"ನೀವೆಲ್ಲರೂ ಒಕ್ಕಲಿಗರು. ಈ ಹೆಸರೇ ನಿಮ್ಮ ಸ್ವಾಭಿಮಾನದ ಬದುಕಿಗೆ ದೊಡ್ಡ ಶಕ್ತಿ. ನೀವು ಉದ್ಯಮಿಗಳಾಗಿ ಬೆಳೆಯಲು ಮುಂದಾಗಿದ್ದೀರಿ. ಅನೇಕರು ಯಶಸ್ವಿಯಾಗಿದ್ದೀರಿ. ಯುವ ಒಕ್ಕಲಿಗ ಉದ್ಯಮಿಗಳನ್ನು ಸೇರಿಸಿ ಉತ್ತೇಜನ ನೀಡಲಾಗುತ್ತಿದೆ. ಇಲ್ಲಿ ಉದ್ಯಮಿಗಳು ಪರಸ್ಪರ ಸೇರಿದ್ದಾರೆ. ನಾನು ಇಲ್ಲಿರುವ ಉದ್ಯಮಿಗಳ ಬಗ್ಗೆ ಮಾಹಿತಿ ಪಡೆದೆ. ಅವರು ಬಹಳ ಶ್ರಮ ಪಡುತ್ತಿದ್ದಾರೆ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ಅವರಿಗೆ ಶುಭ ಹಾರೈಸುತ್ತಿದ್ದೇನೆ" ಎಂದು ತಿಳಿಸಿದರು.

ಬಾಲಗಂಗಾಧರ ನಾಥ ಸ್ವಾಮೀಜಿ ಅವರ ಜನ್ಮದಿನ ಕಾರ್ಯಕ್ರಮಕ್ಕೆ ಸಾಯಿಬಾಬಾ ಅವರು ಬಂದಿದ್ದರು. ಅವರು ದುಡ್ಡು ಹಾಗೂ ಬ್ಲಡ್ ಎರಡೂ ನಿರಂತರ ಚಲನೆಯಲ್ಲಿ ಇರಬೇಕು, ಆಗಲೇ ಒಳ್ಳೆಯದು ಎಂದು ಹೇಳಿದ್ದರು. ನೀವು ಯಾವುದೇ ಉದ್ಯಮ ಮಾಡಿದರೂ ಸಮಾಜದಲ್ಲಿ ಉತ್ತಮ ಘನತೆ ಹೊಂದಿರಬೇಕು. ಈ ದೇಶದಲ್ಲಿ 14 ಲಕ್ಷ ಉದ್ಯಮಿಗಳು ವಿದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಈಗ ಈ ಬಗ್ಗೆ ಚರ್ಚೆ ಮಾಡುವುದಿಲ್ಲ" ಎಂದರು.

ಬಂಗಾರಪ್ಪ ಅವರ ಕಾಲದಲ್ಲಿ ನಾನು ಜೈಲು ಮಂತ್ರಿಯಾಗಿದ್ದಾಗ ನಾಗರತ್ನಮ್ಮ ಅವರು ಸ್ಪೀಕರ್ ಆಗಿದ್ದರು. ಅವರು ಒಮ್ಮೆ ನನ್ನನ್ನು ಪಕ್ಕದಲ್ಲಿ ಕೂರಿಸಿಕೊಂಡು ನೀನು ಜೈಲಿಗೆ ಹೋಗಿ ಬಾ. ಅಲ್ಲಿರುವವರು ಯಾಕೆ ಜೈಲಿಗೆ ಹೋಗಿದ್ದಾರೆ ಎಂದು ತಿಳಿದುಕೊಂಡು ಬಂದು ಹೇಳು ಎಂದರು.

ನಾನು ಜೈಲಿಗೆ ಹೋದೆ, ಅಲ್ಲಿದವರು ಒಬ್ಬ ಹಣ ಕಳ್ಳತನಕ್ಕೆ, ಮತ್ತೊಬ್ಬ ಹೆಣ್ಣಿನ ವಿಚಾರಕ್ಕೆ, ಮತ್ತೊಬ್ಬ ಆಸ್ತಿಗಾಗಿ ದಾಯಾದಿ ಜೊತೆ ಜಗಳವಾಡಿ ಬಂದಿದ್ದ. ಅದೇ ರೀತಿ ನಿಮಗೆ ಯಾರಾದರೂ ತೊಂದರೆ ಕೊಡುವವರು, ಮೋಸ ಮಾಡುವವರು ಇದ್ದರೆ, ಅವರು ನಿಮ್ಮ ಅಕ್ಕಪಕ್ಕದಲ್ಲಿ ಇರುವವರೇ ಆಗಿರುತ್ತಾರೆ. ಬೇರೆಯವರು ತೊಂದರೆ ಕೊಡಲ್ಲ. ನೀವು ಜಾಗರೂಕರಾಗಿ ಇರಬೇಕು" ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದಳಪತಿ ವಿಜಯ್ ಅಭಿನಯದ 'ಜನ ನಾಯಗನ್'

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

SCROLL FOR NEXT