ಬೆಂಗಳೂರು: ಎಸ್ಎಸ್ಎಲ್'ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿದ ಆರೋಪದ ಮೇಲೆ ಉತ್ತರ ವಿಭಾಗದ ಸೈಬರ್ ಪೊಲೀಸರು ವಿವಿಧ ಜಿಲ್ಲೆಗಳ ಆರು ಮಂದಿ ಶಿಕ್ಷಕರನ್ನು ಬಂಧನಕ್ಕೊಳಪಡಿಸಿದ್ದಾರೆ.
ತುಮಕೂರಿನ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕ ವಿ.ಡಿ. ಗಿರೀಶ್, ರಾಮನಗರದ ಶಾಲೆಯ ಶಿಕ್ಷಕ ಅಮ್ಜದ್ ಖಾನ್, ಕಲಬುರಗಿಯ ಖಾಸಗಿ ಶಾಲೆಯ ಮುಖ್ಯಶಿಕ್ಷಕಿ ಶಹೀದಾ ಬೇಗಂ ಹಾಗೂ ಕಲಬುರಗಿಯ ಶಿಕ್ಷಕ ಮೊಹಮ್ಮದ್ ಸಿರಾಜುದ್ದೀನ್, ಫಹಮೀದಾ ಮತ್ತು ಫರ್ಜಾನಾ ಬೇಗಂ ಬಂಧಿತ ಶಿಕ್ಷಕರು.
ಪ್ರಕರಣಕ್ಕೆ ಸಂಬಂಧಿಸಿದಂತೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಪ್ರಶ್ನಿಸಲಾಗಿದ್ದು, ಪ್ರಶ್ನೆ ಪತ್ರಿಕೆಗಳಲ್ಲಿದ್ದ ವಿಶಿಷ್ಟ ಕೋಡ್ ಪ್ರಕರಣವನ್ನು ತ್ವರಿತವಾಗಿ ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದೆ,
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯ ವೆಬ್‌ಸೈಟ್‌ನಿಂದ ಮುಖ್ಯಶಿಕ್ಷಕರು OTP ಬಳಸಿ ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್ ಮಾಡುವ ಅಧಿಕಾರ ಹೊಂದಿದ್ದಾರೆ. ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಶಿಕ್ಷಕರು ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಂಧಿತರಲ್ಲಿರುವ ಇಬ್ಬರು ಮುಖ್ಯಶಿಕ್ಷಕರು ಪರೀಕ್ಷೆಯ ದಿನ ಬೆಳಿಗ್ಗೆ ಸುಮಾರು 6.30ರ ಸುಮಾರಿಗೆ ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿಕೊಂಡು, ಮುಂಚಿತವಾಗಿ ಓದಲು ಅವುಗಳ ಫೋಟೋಗಳನ್ನು ಮೊಬೈಲ್‌ನಲ್ಲಿ ತೆಗೆದು ತಮ್ಮ ಸಂಬಂಧಿಕರ ಮಕ್ಕಳಿಗೆ ಕಳುಹಿಸಿದ್ದಾರೆ.
ಆ ವಿದ್ಯಾರ್ಥಿಗಳು ತಮ್ಮ ಸ್ನೇಹಿತರೊಂದಿಗೂ ಹಂಚಿಕೊಂಡ ಪರಿಣಾಮ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಉಳಿದ ನಾಲ್ವರು ಶಿಕ್ಷಕರು ಸಹ ಅಕ್ರಮವಾಗಿ ಪ್ರಶ್ನೆಪತ್ರಿಕೆಗಳನ್ನು ಪಡೆದುಕೊಂಡಿದ್ದಾರೆ.
ಪ್ರಶ್ನೆಪತ್ರಿಕೆಗಳ ಮೇಲೆ ಅಲ್ಫಾನ್ಯೂಮೆರಿಕ್ ಕೋಡ್‌ಗಳು ಇದ್ದು, ಅವು ಯಾವ ಶಾಲೆಯಿಂದ ಪ್ರಶ್ನೆಪತ್ರಿಕೆ ಡೌನ್‌ಲೋಡ್ ಆಗಿದೆ ಎಂಬುದನ್ನು ಸೂಚಿಸುತ್ತಿದ್ದವು. ಈ ಕೋಡ್‌ಗಳನ್ನು ಅನುಸರಿಸಿ ಪೊಲೀಸರು ಪ್ರಶ್ನೆಪತ್ರಿಕೆಗಳನ್ನು ಡೌನ್‌ಲೋಡ್ ಮಾಡಿ, ಸೋರಿಕೆ ಮಾಡಿದ ಮೂಲಗಳನ್ನು ಪತ್ತೆಹಚ್ಚಿದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಪರಶೀಲನೆಯ ಬಳಿಕ ಪ್ರಶ್ನೆಪತ್ರಿಕೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ ವಿದ್ಯಾರ್ಥಿಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಕೆಲ ವಿದ್ಯಾರ್ಥಿಗಳು “ಡೆಲ್ಟಾ ಹ್ಯಾಕರ್ 32”, “ಡೆಲ್ಟಾ ಹ್ಯಾಕರ್” ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಖಾತೆಗಳನ್ನು ತೆರೆದಿದ್ದು, ಅಲ್ಲಿ ಪ್ರಶ್ನೆಪತ್ರಿಕೆಗಳ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಟೆಲಿಗ್ರಾಂನಲ್ಲಿಯೂ ಪ್ರತ್ಯೇಕ ಚಾನೆಲ್‌ಗಳನ್ನು ತೆರೆದಿದ್ದಾರೆ. ಕೆಲವರು ಲೀಕ್ ಆದ ಪ್ರಶ್ನೆಪತ್ರಿಕೆಗಳನ್ನು ರೂ.50 ರಿಂದ ರೂ.200 ವರೆಗೆ ಮಾರಾಟ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇನ್‌ಸ್ಟಾಗ್ರಾಂ ಹಾಗೂ ಟೆಲಿಗ್ರಾಂನಲ್ಲಿ ಪ್ರಶ್ನೆಪತ್ರಿಕೆಗಳನ್ನು ಹಂಚಿಕೊಂಡ ಇಬ್ಬರನ್ನು ಒಳಗೊಂಡಂತೆ ಒಟ್ಟು ಹತ್ತು ವಿದ್ಯಾರ್ಥಿಗಳನ್ನು ಗುರುತಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರ ಹೇಳಿಕೆಗಳನ್ನು ದಾಖಲಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಶಿಕ್ಷಕರು ಹಣಕಾಸು ಲಾಭಕ್ಕಾಗಿ ಅಲ್ಲ, ತಮ್ಮ ಸಂಬಂಧಿಕರ ಮಕ್ಕಳು ಹಾಗೂ ತಾವು ಬೋಧಿಸುತ್ತಿದ್ದ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಬರಬೇಕೆಂದು ಪ್ರಶ್ನೆಪತ್ರಿಕೆಗಳನ್ನು ಲೀಕ್ ಮಾಡಿದ್ದಾರೆಂದು ತಿಳಿದುಬಂದಿದೆ.ಇದೀಗ ಆರೋಪಿಗಳ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.