ಚಿಕ್ಕಬಳ್ಳಾಪುರ: ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಚಿತ್ರದ ಬ್ಯಾನರ್ ತೆರವು ಮಾಡಿದ್ದಕ್ಕೆ ಶಿಡ್ಲಘಟ್ಟನಗರಸಭೆ ಪೌರಾಯುಕ್ತೆ ಅಮೃತಗೌಡಗೆ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡಗೆ ಸಂಕಷ್ಟ ಎದುರಾಗಿದೆ. ಅಶ್ಲೀಲ ಪದ ಬಳಕೆ ಮಾಡಿ ನಿಂದಿಸಿದ್ದ ರಾಜೀವ್ ಗೌಡ ವಿರುದ್ಧ ಪೌರಾಯುಕ್ತೆ ಅಮೃತಾಗೌಡ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿರುವ ರಾಜೀವ್ ಗೌಡ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಿ. ಈ ಘಟನೆಯಿಂದ ನನಗೆ ಮಾನಸಿಕವಾಗಿ ತೀವ್ರ ಆಘಾತವಾಗಿದೆ. ನನ್ನ ಆತ್ಮಸ್ಥೈರ್ಯ ಕುಂದಿದೆ. ನಾನು ಒಬ್ಬಳೇ ವಾಸವಾಗಿದ್ದೇನೆ. ನನಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ರಾಜೀವ್ ಗೌಡ ವಿರುದ್ಧ BNS 79, 132, 352,199, 54 ಅಡಿಯಲ್ಲಿ ದೂರು ದಾಖಲಾಗಿದೆ.
ಕ್ಷಮೆಯಾಚಿಸಿದ ರಾಜೀವ್ ಗೌಡ
ಬ್ಯಾನರ್ ತೆರವುಗೊಳಿಸಿದ್ದಕ್ಕೆ ಪೌರಾಯುಕ್ತೆಗೆ ಅಶ್ಲೀಲವಾಗಿ ನಿಂದನೆ ಮಾಡಿ, ಬೆದರಿಕೆ ಹಾಕಿರುವ ಆಡಿಯೋ ವೈರಲ್ ಕುರಿತಂತೆ ಮಾತನಾಡಿರುವ ರಾಜೀವ್ ಗೌಡ, ನಾನು ಅಧಿಕಾರಿಯ ಜೊತೆ ಕೆಟ್ಟದಾಗಿ ಮಾತನಾಡಿಲ್ಲ. ಅಧಿಕಾರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ಉದ್ದೇಶ ಪೂರಕವಾಗಿ ನಾನು ಮಾತನಾಡಿಲ್ಲ. ಆಡಿಯೋದಲ್ಲಿ ಮಾತನಾಡಿರುವುದು ನಾನೇ. ಆದರೆ ಕೆಟ್ಟದಾಗಿ ಮತನಾಡಿಲ್ಲ. ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಹಾಗಾಗಿ ಬೇಸರದಿಂದ ಮತನಾಡಿದ್ದೇನೆ. ಆಯುಕ್ತಗೆ ನಾನು ಬೆಂಕಿ ಹಚ್ಚುತ್ತೇನೆ ಎಂದು ಹೇಳಿಲ್ಲ. ಬದಲಿಗೆ ಫ್ಲೆಕ್ಸ್ ಗೆ ಬೆಂಕಿ ಹಚ್ಚುತ್ತೇನೆ ಎಂದು ಹೇಳಿದ್ದೇನೆ ಅಷ್ಟೇ. ನನ್ನದು ತಪ್ಪಾಗಿದ್ದರೆ ಏನೇ ಕ್ರಮ ತೆಗೆದುಕೊಂಡರು ಎದುರಿಸುತ್ತೇನೆ ಎಂದು ಸಮಜಾಯಿಷಿ ನೀಡಿದ್ದಾರೆ.
ಆಗಿದ್ದೇನು?
ಶಿಡ್ಲಘಟ್ಟದ ನೆಹರೂ ಮೈದಾನದಲ್ಲಿ 'ಕಲ್ಟ್' ಸಿನಿಮಾದ ಪ್ರಚಾರ ಸಭೆ ನಡೆದಿತ್ತು. ಈ ವೇಳೆ, ಕೋಟೆ ವೃತ್ತದಲ್ಲಿ ರಸ್ತೆಗೆ ಅಡ್ಡವಾಗಿ ಸಿನಿಮಾ ಪ್ರಚಾರದ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಟ್ರಾಫಿಕ್ ಸಮಸ್ಯೆಗೆ ಉಂಟಾಯಿತು. ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದರು.