ಬೆಂಗಳೂರು: ಮನೆ ಕೆಲಸದಾಕೆ ತಾನು ಕದ್ದ ಬ್ರಾಂಡೆಡ್ ಗಡಿಯಾರ ಧರಿಸಿದ್ದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ಗೆ ಹಾಕಿದ್ದು, ಆಕೆ ಕೆಲಸ ಮಾಡುತ್ತಿದ್ದ ಮನೆ ಮಾಲೀಕರೊಬ್ಬರಿಗೆ ಅವರ ಕಾಣೆಯಾದ ಬೆಲೆಬಾಳುವ ವಸ್ತುಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ.
ಇದೀಗ ಗಡಿಯಾರ ಹಾಗೂ ಚಿನ್ನಾಭರಣ ಕದ್ದ ಮನೆ ಕೆಲಸದ ಮಹಿಳೆ, ದೊಡ್ಡಕನ್ನಹಳ್ಳಿ ನಿವಾಸಿ ಸೌಮ್ಯ(26) ಅವರನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಖಾಸಗಿ ಕಂಪನಿಯೊಂದರ ಉದ್ಯೋಗಿ, ರೋಹಿತ್(39) ಅವರು ಜನವರಿ 5 ರಂದು ಈ ಸಂಬಂಧ ಪೊಲೀಸರಿಗೆ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 8, 2025 ರಂದು, ಅವರ ಮನೆಯಿಂದ 42 ಗ್ರಾಂ ಚಿನ್ನದ ಮಂಗಳಸೂತ್ರ, ಒಂದು ಜೋಡಿ ಕೃತಕ ಕಿವಿಯೋಲೆಗಳು ಮತ್ತು ಮೈಕೆಲ್ ಕೋರ್ಸ್ ಬ್ರಾಂಡೆಡ್ ಗಡಿಯಾರ ಕಾಣೆಯಾಗಿದೆ ಎಂದು ರೋಹಿತ್ ದೂರು ನೀಡಿದ್ದರು.
ಸೌಮ್ಯಾಳನ್ನು ರೋಹಿತ್ ಕುಟುಂಬ ಪ್ರಶ್ನಿಸಿದಾಗ, ಅವರು ಯಾವುದೇ ವಸ್ತುಗಳನ್ನು ಕದ್ದಿಲ್ಲ ಎಂದು ಹೇಳಿ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದ್ದರು. ಡಿಸೆಂಬರ್ 28 ರಂದು, ರೋಹಿತ್ ಆಕಸ್ಮಿಕವಾಗಿ ವಾಟ್ಸಾಪ್ ಪರಿಶೀಲಿಸುತ್ತಿದ್ದಾಗ, ಸೌಮ್ಯಾಳ ಅಪ್‌ಲೋಡ್ ಮಾಡಿದ್ದ ಸ್ಟೇಟಸ್ ಅನ್ನು ಗಮನಿಸಿದ್ದಾರೆ. ಅದರಲ್ಲಿ ಅವಳು ಮೈಕೆಲ್ ಕೋರ್ಸ್ ಗಡಿಯಾರ ಧರಿಸಿರುವುದು ಕಂಡುಬಂದಿದೆ.
ಅದು ಅವರ ಮನೆಯಿಂದ ಕದ್ದ ಅದೇ ಗಡಿಯಾರ ಎಂದು ಅರಿತುಕೊಂಡ ರೋಹಿತ್, ಸ್ಕ್ರೀನ್‌ಶಾಟ್‌ಗಳ ಜೊತೆಗೆ ಸೌಮ್ಯಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಜನವರಿ 8 ರಂದು ಸೌಮ್ಯಾಳನ್ನು ವಶಕ್ಕೆ ಪಡೆದಿದ್ದು, ವಿಚಾರಣೆಯ ಸಮಯದಲ್ಲಿ ಅವಳು ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಅಲ್ಲದೆ ಆಕೆಯಿಂದ ಕದ್ದ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 20,000 ರೂ. ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿದೆ.