ವಿಜಯಪುರ: ಕಳೆದ ತಿಂಗಳು ಡಿಸೆಂಬರ್ 31ನೇ ತಾರೀಖು ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಸಿದ್ದೇಶ್ವರ ಮಹಾಸ್ವಾಮಿಗಳ ಶ್ರೀಗುರುನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ದಯೆ-ಧರ್ಮ ಎಂಬ ವಿಷಯ ಕುರಿತ ಗೋಷ್ಠಿಯಲ್ಲಿ ನಾನು ಮಾತನಾಡಿದ್ದೆ, ಆದರೆ ಅದನ್ನು ಕೆಲವು ಮಾಧ್ಯಮಗಳಲ್ಲಿ ತಪ್ಪು ಸಂದೇಶ ನೀಡುವ ರೀತಿಯಲ್ಲಿ ವರದಿ ಪ್ರಕಟಿಸಿದ್ದಾರೆ ಎಂದು ನಿಡಸೋಸಿ ನಿಜಲಿಂಗೇಶ್ವರ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ಸ್ಪಷ್ಟೀಕರಣ ನೀಡಿರುವ ಸ್ವಾಮೀಜಿ, ಹಿಂದೂ ಧರ್ಮದಲ್ಲಿ ತಾರತಮ್ಯ ಹೆಚ್ಚಿದೆ, ಸಮಾನತೆ ಮತ್ತು ವಿಶ್ವಶಾಂತಿಯ ಸಂದೇಶವನ್ನು ಸಾರುವ ಕ್ರೈಸ್ತ ಧರ್ಮ ವಿಶ್ವದಲ್ಲಿ ಆವರಿಸಬೇಕು ಎಂದು ನಾನು ಹಿಂದೂ ಧರ್ಮವನ್ನು ತೆಗಳಿ ಕ್ರೈಸ್ತ ಧರ್ಮವನ್ನು ಪಾಲಿಸಬೇಕು ಎಂದು ಹೇಳಿರುವುದಾಗಿ ವರದಿಯಲ್ಲಿ ಪ್ರಕಟಿಸಲಾಗಿದೆ. ಈ ರೀತಿಯಾಗಿ ನಾನು ಹೇಳಿಲ್ಲ, ಅಲ್ಲಿ ನಾನು ಯಾವ ಧರ್ಮವನ್ನು ಹೊಗಳಿಯೂ ಇಲ್ಲ, ತೆಗಳಿಯೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಹೇಳದೇ ಇರುವ ವಿಷಯಗಳನ್ನು ವರದಿಯ ತಲೆಬರಹದಲ್ಲಿ ಹಾಕಿದ್ದಾರೆ. ಇದರಿಂದ ಹಲವರು ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯ ಚಿಂತಕರೇ ನನ್ನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿರುವುದು ವಿಷಾದನೀಯ ಸಂಗತಿ, ನನಗೆ ಬಹಳ ಬೇಸರವಾಗಿದೆ. ನಮ್ಮ ಸಂಸ್ಕೃತಿಯನ್ನು ಯಾವ ದಿಕ್ಕಿನ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ನನಗೆ ಅಚ್ಚರಿಯಾಗುತ್ತಿದೆ, ಸೋಷಿಯಲ್ ಮೀಡಿಯಾಗಳನ್ನು ಯಾವ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ ಎಂದು ನನಗೆ ಚಿಂತೆಗೀಡು ಮಾಡಿದೆ ಎಂದರು.
ಷಡ್ಯಂತ್ರದ ಒಂದು ಭಾಗ
ನಮ್ಮ ಭಾರತದ ಸಂಸ್ಕೃತಿಯ ಯುವಕರನ್ನೇ ನಮ್ಮ ವಿರುದ್ಧ ಎತ್ತಿಕಟ್ಟುವ ಷಡ್ಯಂತ್ರದ ಭಾಗವಾಗಿದ್ದು, ನಮ್ಮವರನ್ನೇ ಬಲಿಮಾಡುತ್ತಿರುವುದು ಶೋಚನೀಯ ವಿಷಯ, ಸಮಾಜ ಎತ್ತ ಸಾಗುತ್ತಿದೆ ಎಂದು ಯೋಚಿಸಬೇಕಾಗಿದೆ ಎಂದು ಸ್ವಾಮೀಜಿ ಹೇಳಿ ತಾವು ಅಂದು ಗೋಷ್ಠಿಯಲ್ಲಿ ಮಾತನಾಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ.