ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದಾದ್ಯಂತ ಹಾಕಿಸಿದ್ದ ಅಕ್ರಮ ಬ್ಯಾನರ್‌ಗಳನ್ನು ತೆರವುಗೊಳಿಸಿದ ಪುರಸಭೆ ಅಧಿಕಾರಿ ಅಮೃತಾ ಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ.
ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಕರೆ ಮಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅಶ್ಲೀಲವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಲ್ಲದೆ ಸಾರ್ವಜನಿಕವಾಗಿ ಚಪ್ಪಲಿಯಿಂದ ಹೊಡೆಸುವುದಾಗಿ ಹೇಳಿದ್ದಾನೆ. ಶಿಡ್ಲಘಟ್ಟದಿಂದ ಅಮೃತಗೌಡರನ್ನು ವರ್ಗಾವಣೆ ಮಾಡಿಸುತ್ತೇನೆ ರಾಜೀವ್ ಗೌಡ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಲಾದ ಸಂಭಾಷಣೆಯ ಆಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಇದರಿಂದ ಮನನೊಂದ ಅಮೃತಾ ಗೌಡ ಕಣ್ಣೀರಿಟ್ಟಿದ್ದಾರೆ. ಸದ್ಯ ಈ ಘಟನೆ ಚಿಕ್ಕಬಳ್ಳಾಪುರದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ನಾಯಕನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ತಮ್ಮ ಕಚೇರಿಯ ಹೊರಗೆ ಅಮೃತ ಗೌಡ ಪ್ರತಿಭಟನೆ ನಡೆಸಿದರು.
ಆಡಿಯೋದಲ್ಲಿ ಅಮೃತಾ, ಬ್ಯಾನರ್ ಅಪಘಾತಗಳಿಗೆ ಕಾರಣವಾಗುತ್ತಿದ್ದ ಕಾರಣ ಜನನಿಬಿಡ ಜಾಗಗಳಿಂದ ತೆಗೆದುಹಾಕಲಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ಬ್ಯಾನರ್ ಹಾಕಲಾಗಿತ್ತು. ಅಲ್ಲದೆ ಅದಕ್ಕೆ ಅನುಮತಿ ಸಹ ಪಡೆದಿಲ್ಲ ಎಂದು ರಾಜೀವ್ ಗೌಡಗೆ ವಿವರಿಸಲು ಪ್ರಯತ್ನಿಸಿದರು. ಆದರೆ ಇದನ್ನು ಅರ್ಥ ಮಾಡಿಕೊಳ್ಳದ ರಾಜೀವ್ ಗೌಡ "ನನ್ನ ಬ್ಯಾನರ್ ತೆಗೆದರೆ ನಾನು ಬಂದು ಬೆಂಕಿ ಹಚ್ಚುತ್ತೇನೆ" ಎಂದು ಹೇಳಿದ್ದಾರೆ. ಈ ಬಗ್ಗೆ ಮಾತನಾಡಿರುವ ಅಮೃತ ಗೌಡ, ನಾನು ಮೊದಲು ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದೆ, ತಂದೆಯ ಆಸೆಯಂತೆ ಈ ಕೆಲಸಕ್ಕೆ ಬಂದೆ. ಆದರೆ ನನಗೆ ಕರೆ ಮಾಡಿ ಬೆದರಿಕೆ ಹಾಕಿ ನಿಂದಿಸಿದ್ದಾರೆ. ನನ್ನ ಸರ್ವಿಸ್ ನಲ್ಲಿ ಇಂತಹ ಘಟನೆ ನಡೆದಿರಲಿಲ್ಲ ಎಂದು ಅಮೃತಾ ಗೌಡ ಕಣ್ಣೀರಿಟ್ಟಿದ್ದಾರೆ. ಸಾರ್ವಜನಿಕರು, ವಾಹನ ಸವಾರರಿಗೆ ತೊಂದರೆ ಆಗುತ್ತೆ ಅದಕ್ಕೆ ಬ್ಯಾನರ್ ತೆಗೆಸಿದೆ. ಇಷ್ಟಕ್ಕೆ ಬೆದರಿಕೆ ಹಾಕಿದ್ದಾರೆ ಎಂದು ಅಮೃತಾ ಗೌಡ ಕಣ್ಣೀರು ಹಾಕಿದ್ದಾರೆ.
ಆಡಿಯೋ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಪ್ರತಿಕ್ರಿಯಿಸಿದ ರಾಜೀವ್ ಗೌಡ, ಬ್ಯಾನರ್ ಅವಳವಡಿಸಲು ಎಲ್ಲಾ ರೀತಿಯ ಅನುಮತಿಗಳನ್ನು ಪಡೆಯಲಾಗಿದೆ. ನಾನು ಯಾರ ವಿರುದ್ಧವೂ ಅವಹೇಳನಕಾರಿ ಪದಗಳನ್ನು ಅಥವಾ ನಿಂದನೆಗಳನ್ನು ಎಂದಿಗೂ ಬಳಸಿಲ್ಲ. ನನ್ನ ಆಡಿಯೋದಲ್ಲಿನ ನನ್ನ ಮಾತುಗಳನ್ನು ತಿರುಚಲಾಗಿದೆ ಎಂದರು.
ಅಮೃತಗೌಡ ವಿರುದ್ಧ ರಾಜೀವ್ ಗೌಡ ನಿಂದನೀಯ ಪದಗಳನ್ನು ಬಳಸಿದ್ದಕ್ಕಾಗಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು. ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕ ರಾಜಶೇಖರ ರೆಡ್ಡಿ ಸಾವಿಗೆ ವಿವಾದಾತ್ಮಕ ಬ್ಯಾನರ್ ಕಾರಣವಾಗಿತ್ತು. ಇದೀಗ ಚಿಕ್ಕಬಳ್ಳಾಪುರದಲ್ಲಿ ಮತ್ತೋಮ್ಮೆ ಬ್ಯಾನರ್ ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರು ರಾಜೀವ್ ಗೌಡನನ್ನು ಬಂಧಿಸಲು ತಕ್ಷಣ ಆದೇಶಿಸಬೇಕು ಎಂದು ನಾರಾಯಣಸ್ವಾಮಿ ಹೇಳಿದರು.