ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹಂತ ತಲುಪಿದ್ದು ಈಗಾಗಲೇ ನಾನಾ ವಿಚಾರಗಳಿಂದ ಸುದ್ದಿಗೆ ಗ್ರಾಸವಾಗಿದ್ದು ಈ ರಿಯಾಲಿಟಿ ಷೋ ಇದೀಗ ಕಾರ್ಯಕ್ರಮೇತರ ವಿಚಾರವಾಗಿ ಮತ್ತೆ ಸುದ್ದಿಗೆ ಗ್ರಾಸವಾಗುತ್ತಿದೆ.
ಹೌದು.. ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆ ಹಂತಕ್ಕೆ ಬಂದಿದ್ದು, ಫೈನಲ್ ನಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯಾ ಶೈವ, ಧನುಷ್, ಗಿಲ್ಲಿ ನಟ ಮತ್ತು ಮ್ಯೂಟೆಂಟ್ ರಘು ಸೇರಿ ಒಟ್ಟು 6 ಮಂದಿ ಸ್ಪರ್ಧಿಗಳು ಪ್ರಶಸ್ತಿಗಾಗಿ ಸೆಣಸುತ್ತಿದ್ದಾರೆ. ಈ ನಡುವೆ ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಕರವೇ ಅಧ್ಯಕ್ಷ ನಾರಾಯಣ ಗೌಡ ನಟ ಸುದೀಪ್ ಅವರನ್ನು ಭೇಟಿ ಮಾಡಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ನಾರಾಯಣ ಗೌಡ ಅವರು ತಮ್ಮ ಪುತ್ರನ ವಿವಾಹ ಆಮಂತ್ರಣ ನೀಡಲು ನಟ ಸುದೀಪ್ ಅವರ ಭೇಟಿಯಾಗಿದ್ದರು. ಆದರೆ ಇತ್ತ ಬಿಗ್ ಬಾಸ್ ಅಭಿಮಾನಿಗಳು ಅವರು ಅಶ್ವಿನಿಗೌಡ ಅವರನ್ನು ಗೆಲ್ಲಿಸಲು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಅಶ್ವಿನಿಗೌಡ ಅವರು ಕರವೇ ನಾಯಕಿಯಾಗಿದ್ದು ಇದೇ ಕಾರಣಕ್ಕೆ ಅವರನ್ನು ಗೆಲ್ಲಿಸಲು ನಾರಾಯಣಗೌಡ ಸುದೀಪ್ ರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ಸಂಘಟನೆ ನಾಯಕರು ಇಲ್ಲ.. ಮದುವೆ ಆಮಂತ್ರಣ ನೀಡಲು ಮಾತ್ರ ಅವರು ಸುದೀಪ್ ರನ್ನು ಭೇಟಿಯಾಗಿದ್ದರು. ಅಷ್ಟಕ್ಕೂ ನಾರಾಯಣಗೌಡ ಅವರಿಗೆ ಬಿಗ್ ಬಾಸ್ ಶೋ ಕುರಿತು ಆಸಕ್ತಿಯೇ ಇಲ್ಲ ಎಂದೂ ಸ್ಪಷ್ಟಪಡಿಸಿದ್ದರು. ಅದಾಗ್ಯೂ ಈ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
Bigg Boss ಅನ್ನೋದೇ ಪುಟಗೋಸಿ
ಕರವೇ ಧರ್ಮರಾಜ್ ಗೌಡ ಅವರು ಸ್ಪಷನೆ ನೀಡಿ, ನಾರಾಯಣ ಗೌಡ ಅವರು ಮಗನ ಮದುವೆ ಪತ್ರಿಕೆಯನ್ನು ಕೊಡುತ್ತಿರುವುದನ್ನು ತಿಂಗಳ ಹಿಂದೆಯೇ ರಾಜ್ಯದ ಜನರು ನೋಡಿದ್ದಾರೆ. ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಹಾಗೂ ಕಲಾವಿದರಿಗೆ ನಾರಾಯಣ ಗೌಡ ಅವರು ಮದುವೆ ಪತ್ರಿಕೆ ನೀಡುತ್ತಿದ್ದಾರೆ. ಹಾಗಾಗಿ ಸುದೀಪ್ ಅವರು ನಿನ್ನೆ ಬರಲು ಹೇಳಿದ್ದರು. ಅವರನ್ನು ಭೇಟಿ ಮಾಡಿ ಮದುವೆ ಆಹ್ವಾನ ಪತ್ರಿಕೆ ನೀಡಲಾಗಿದೆ’ ಎಂದು ಹೇಳಿದರು.
'ಬೇರೆಯವರ ರೀತಿಯೇ ಸುದೀಪ್ ಅವರಿಗೆ ಮದುವೆ ಪತ್ರಿಕೆ ನೀಡಿದ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿದೆ. ಅದನ್ನು ಕೆಲವು ಟ್ರೋಲ್ ಪೇಜ್ಗಳು ತೆಗೆದುಕೊಂಡು ಈ ರೀತಿ ಮಾಡುತ್ತಿದ್ದಾರೆ. ನಾರಾಯಣ ಗೌಡ್ರು ಹಾಗೂ ಸುದೀಪ್ ಅವರ ವಿರೋಧಿಗಳು ಈ ರೀತಿ ಹೊಟ್ಟೆ ತುಂಬಿಸಿಕೊಳ್ಳುತ್ತಿರುವುದಕ್ಕೆ ನಾಚಿಕೆ ಆಗಬೇಕು. ಅಶ್ವಿನಿಗೌಡ ಕನ್ನಡ ಹೋರಾಟಗಾರ್ತಿ. ಕನ್ನಡಕ್ಕಾಗಿ ನಾವೆಲ್ಲ ಬೆಂಬಲಿಸಿದ್ದೇವೆ’ ಎಂದು ಧರ್ಮಣ್ಣ ಕಿಡಿಕಾರಿದ್ದಾರೆ.
'ಜಾಲತಾಣದಲ್ಲಿ ಟೀಕಿಸುವ ಪ್ರತಿಯೊಬ್ಬರಿಗೂ ನಾನು ಉತ್ತರ ಕೊಡಬೇಕಿಲ್ಲ. ಜನರು ನಮ್ಮ ಬಗ್ಗೆ ಸಾವಿರ ಮಾತುಗಳನ್ನು ಆಡುತ್ತಾರೆ. ಟೀಕೆ ಮಾಡುವವರು ಮೊದಲು ನಮ್ಮಂತೆಯೇ ಹೋರಾಟ ಮಾಡಿ ತೋರಿಸಲಿ. ಬಿಗ್‌ಬಾಸ್ ಅನ್ನೋದೇ ಒಂದು ಪುಟಗೋಸಿ ಶೋ. ಒಳ್ಳೆಯವರನ್ನ ಕೆಟ್ಟದಾಗಿ, ಕೆಟ್ಟವರನ್ನ ಒಳ್ಳೆಯದಾಗಿ ತೋರಿಸುತ್ತಾರೆ. ಕರವೇ ನಾಯಕ ನಾರಾಯಣಗೌಡ ಅವರು ಕನ್ನಡಕ್ಕಾಗಿ 35 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಅವರಿಗೆ ಇಂತಹ ಕ್ಷುಲ್ಲಕ ವಿಚಾರಕ್ಕೆ ಸಮರ್ಥನೆ ಕೊಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.