ಬೆಂಗಳೂರು: ಸಂಕ್ರಾಂತಿ ಹಬ್ಬದ ದಿನವಾದ ಗುರುವಾರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.
ದಿನೇಶ್ ಗುಂಡೂರಾವ್ ಅವರನ್ನು ಸ್ವಾಗತಿಸುವ ವೇಳೆ ಸಿಡಿಸಿದ ಪಟಾಕಿಯ ಕಿಡಿ ತಗುಲಿದ ಪರಿಣಾಮ ಬ್ಯಾನರ್ ಹೊತ್ತಿ ಉರಿದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಚಿಕ್ಕಪೇಟೆಯಲ್ಲಿ ಈ ಘಟನೆ ನಡೆದಿದೆ. ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಕ್ರಾಂತಿ ಆಚರಣೆ ಜೊತೆಗೆ ಕಾಶಿವಿಶ್ವೇಶ್ವರ ದೇವಸ್ಥಾನ ರಸ್ತೆ ಉದ್ಘಾಟನೆ ಕೂಡ ಇತ್ತು. ಈ ವೇಳೆ ಘಟನೆ ನಡೆದಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ ಏರ್ಪಡಿಸಲಾಗಿತ್ತು. ದೇವಾಲಯದ ಮುಂದೆ ಹುಲ್ಲು, ಹೂ ಬ್ಯಾನರ್ ಗಳಿಂದ ಸಿಂಗಾರ ಮಾಡಲಾಗಿತ್ತು. ಪಟಾಕಿ ಹಚ್ಚುವಾಗ ಬೆಂಕಿ ಕಿಡಿ ಬ್ಯಾನರ್ ಗೆ ಹಾಕಿದ್ದ ಹುಲ್ಲಿಗೆ ಬಿದ್ದು ಅವಘಡ ಸಂಭವಿಸಿದೆ.
ದೇವರ ದರ್ಶನ ಪಡೆಯಲು ವೃದ್ಧರು, ಮಕ್ಕಳು, ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದ್ದರು. ಸ್ಥಳೀಯರ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಬೆಂಕಿಯ ಪ್ರಮಾಣ ಹೆಚ್ಚಾಗಿದ್ದರೆ ದೊಡ್ಡ ದುರಂತ ಸಂಭವಿಸುತ್ತಿತ್ತು.