ಬೆಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನಲ್ಲಿ ಸುಮಾರು 200 ಕೋಟಿ ರೂ. ಮೌಲ್ಯದ 320 ಎಕರೆ ಸರ್ಕಾರಿ ಗೋಮಾಳ ಭೂಮಿಯನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ವರ್ಗಾಯಿಸಿದ ಪ್ರಕರಣವೊಂದು ಉಪ ಲೋಕಾಯುಕ್ತರ ದಾಳಿ ವೇಳೆ ಬಯಲಾಗಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ನೀಡಿದ ವಾರಂಟ್‌ಗಳ ಮೇರೆಗೆ ಲೋಕಾಯುಕ್ತ ಪೊಲೀಸರು ಮಂಗಳವಾರ ನಾಗಮಂಗಲ ತಾಲ್ಲೂಕಿನ ಏಳು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದರು.
ಆರೋಪಿಗಳಿಗೆ ಸಂಬಂಧಿಸಿದ ನಿವಾಸಗಳು, ಸರ್ಕಾರಿ ಅತಿಥಿ ಗೃಹ, ಹೋಟೆಲ್ ಹಾಗೂ ನಾಗಮಂಗಲ ತಾಲ್ಲೂಕು ಕಚೇರಿಯಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದರು. ನಾಗಮಂಗಲ ವಿಧಾನಸಭಾ ಕ್ಷೇತ್ರವನ್ನು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಪ್ರತಿನಿಧಿಸುತ್ತಿದ್ದಾರೆ.
ಬಗರ್ ಹುಕುಂ ಸಮಿತಿ (BHC) ಹೆಸರಿನಲ್ಲಿ ಭೂಮಿ ಮಂಜೂರು ಮಾಡುವ ನೆಪದಲ್ಲಿ ದಾಖಲೆಗಳನ್ನು ಕಳ್ಳತನ, ತಿದ್ದುಪಡಿ ಮತ್ತು ನಕಲು ಮಾಡಿ ಗೋಮಾಳ ಭೂಮಿಯನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಲೋಕಾಯುಕ್ತ ಪೊಲೀಸರು ಸಲ್ಲಿಸಿದ ದೂರಿನ ಮೇರೆಗೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಸಂಚು, ವಂಚನೆ, ದಾಖಲೆ ತಿದ್ದುಪಡಿ, ನಕಲಿ ದಾಖಲೆ ಬಳಕೆ ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಅಕ್ರಮ ಸಂಬಂಧ ತಾಲ್ಲೂಕು ಕಚೇರಿಯ ಭೂ ದಾಖಲೆ ಶಾಖೆಯ ಎರಡನೇ ದರ್ಜೆ ಸಹಾಯಕರಾದ ಸತೀಶ್ ಎಚ್.ವಿ. ಮತ್ತು ಗುರುಮೂರ್ತಿ, ರವಿಶಂಕರ, ಉಮೇಶ್, ಎಸ್. ಯೋಗೇಶ್ ಅವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಲೋಕಾಯುಕ್ತ ಕಚೇರಿಯ ಹೇಳಿಕೆಯ ಪ್ರಕಾರ, ಆರೋಪಿಗಳು ಸಾಗುವಳಿ ಚೀಟಿ, ಮಂಜೂರಾತಿ ಲೆಡ್ಜರ್ ಮತ್ತು ಇತರೆ ಭೂ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಿ ನಾಗಮಂಗಲ ತಾಲ್ಲೂಕಿನ ಎಚ್‌ಎನ್ ಕವಲು, ಚಿಕ್ಕಜಟಕ, ದೊಡ್ಡಜಟಕ, ಕರದಹಳ್ಳಿ ಮತ್ತು ಇತರ ಕೆಲವು ಗ್ರಾಮಗಳಲ್ಲಿನ ಗೋಮಳ ಭೂಮಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ.
ಗ್ರಾಮ ಸಹಾಯಕ ಯೋಗೇಶ್ ಅವರ ಕಾರಿನಲ್ಲಿ ಭೂ ಮಂಜೂರಾತಿಗೆ ಸಂಬಂಧಿಸಿದ ಅರ್ಜಿಗಳು ಪತ್ತೆಯಾಗಿವೆ. ಪೊಲೀಸ್ ವರಿಷ್ಠಾಧಿಕಾರಿ ಸುರೇಶ್ ಬಾಬು ನೇತೃತ್ವದ ಲೋಕಾಯುಕ್ತ ಪೊಲೀಸರು ಯೋಗೇಶ್ ಅವರನ್ನು ವಿಚಾರಣೆ ನಡೆಸಿದಾಗ, ದಾಖಲೆ ಕೊಠಡಿ ಸಿಬ್ಬಂದಿಗಳಾದ ಯೋಗೇಶ್, ವಿಜಯ್ ಕುಮಾರ್, ಸತೀಶ್ ಮತ್ತು ಯಶವಂತ್, ಚಿನ್ನಸ್ವಾಮಿ 2020 ರಿಂದ ಸರ್ಕಾರಿ ಭೂಮಿಯನ್ನು ಬೇರೆಡೆಗೆ ತಿರುಗಿಸುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.
ಬಗರ್ ಹುಕುಂ ಸಮಿತಿ ನಿಯಮದಂತೆ ಒಬ್ಬ ಫಲಾನುಭವಿಗೆ ಗರಿಷ್ಠ 4 ಎಕರೆ 38 ಗುಂಟೆ ಮಾತ್ರ ಮಂಜೂರು ಮಾಡಬಹುದು. ಆದರೆ ತನಿಖೆಯಲ್ಲಿ ಪ್ರಕ್ರುಲ್ ಖಾನ್‌ಗೆ 9 ಎಕರೆ 27 ಗುಂಟೆ ಮತ್ತು ಕಲೀಂ ಮುಲ್ಲಾಗೆ 11 ಎಕರೆ 23 ಗುಂಟೆ ಭೂಮಿ ಮಂಜೂರು ಮಾಡಿರುವ ದಾಖಲೆಗಳು ಪತ್ತೆಯಾಗಿವೆ. ಆಶ್ಚರ್ಯಕರ ವಿಚಾರವೆಂದರೆ, ಈ ದಾಖಲೆಗಳು ಮೂಲ ದಾಖಲೆ ಕೊಠಡಿಯಲ್ಲಿ ಲಭ್ಯವಿಲ್ಲ ಎಂಬುದು ಶೋಧ ಕಾರ್ಯಾಚರಣೆ ವೇಳೆ ತಿಳಿದುಬಂದಿದೆ. ಈ ಪ್ರಕರಣವು ರಾಜ್ಯದಲ್ಲಿ ಸರ್ಕಾರಿ ಭೂಮಿ ಅಕ್ರಮದ ಗಂಭೀರತೆಯನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ