ಮನೆ ನಿರ್ಮಾಣದ ಸಮಯದಲ್ಲಿ ನಿಧಿ ಸಿಕ್ಕ ನಂತರ ರಾಜ್ಯದ ಗಮನ ಸೆಳೆದಿದ್ದ ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ರಾಜ್ಯ ಸರ್ಕಾರ ಶುಕ್ರವಾರ ನಿಧಿ ಹುಡುಕಾಟಕ್ಕೆ ಮುಂದಾಗಿದೆ. ಕೇಂದ್ರ ಪುರಾತತ್ವ ಇಲಾಖೆಯಿಂದ ಅನುಮತಿ ಸಿಕ್ಕ ಹಿನ್ನಲೆಯಲ್ಲಿ ಇಂದಿನಿಂದ ಉತ್ಖನನ ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಉತ್ಖನನದ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನೇ ಸ್ಥಳಾಂತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗದಗ ಜಿಲ್ಲಾಧಿಕಾರಿ ಸಿಎನ್ ಶ್ರೀಧರ್, ಗ್ರಾಮವನ್ನು ಸ್ಥಳಾಂತರಿಸುವ ನಿರ್ಧಾರವು ಉತ್ಖನನದ ಸಂಶೋಧನೆಗಳ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ. ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಪೂರ್ಣ ಪ್ರಮಾಣದ ಉತ್ಖನನವನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಪ್ರವಾಸೋದ್ಯಮ ಇಲಾಖೆ, ಪುರಾತತ್ವ ಇಲಾಖೆ, ಲಕ್ಕುಂಡಿ ಪರಂಪರೆ ಅಭಿವೃದ್ಧಿ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಂಡಿವೆ.
ಮಾರ್ಚ್‌ನಲ್ಲಿ ನಡೆಯಲಿರುವ ಐಪಿಎಲ್ 2026ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ಕಾಲ್ತುಳಿತದ ಘಟನೆಯ ನಂತರ ಚಿನ್ನಸ್ವಾಮಿಯಲ್ಲಿ ಯಾವುದೇ ಪಂದ್ಯಗಳನ್ನು ನಡೆಸಲು ಅನುಮತಿ ಇಲ್ಲದಂತಾಗಿದೆ. ಆರ್‌ಸಿಬಿಗೆ ತವರು ಮೈದಾನವೇ ಇಲ್ಲದಂತಾಗಿದ್ದು, ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ನೆರವಾಗುವಂತೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ ಪರಿಹಾರವೊಂದನ್ನು ಕೆಎಸ್‌ಸಿಎ ಮುಂದಿಟ್ಟಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ಗೆ (ಕೆಎಸ್‌ಸಿಎ) ಔಪಚಾರಿಕ ಸಂವಹನದಲ್ಲಿ ಆರ್‌ಸಿಬಿ, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂದಾಜು ₹4.5 ಕೋಟಿ ರೂಪಾಯಿ ತನ್ನದೇ ವೆಚ್ಚದಲ್ಲಿ 300 ರಿಂದ 350 ಎಐ ಚಾಲಿತ ಕ್ಯಾಮೆರಾಗಳನ್ನು ಅಳವಡಿಸಲು ಪ್ರಸ್ತಾಪಿಸಿದೆ. ಇದರ ರಿಯಲ್-ಟೈಂ ಎಐ ವಿಡಿಯೋ ವಿಶ್ಲೇಷಣಾ ಸಾಮರ್ಥ್ಯವು ಹಿಂಸೆ, ಅನಧಿಕೃತ ಪ್ರವೇಶ ಮತ್ತು ಒಳನುಗ್ಗುವಿಕೆಯಂತಹ ಘಟನೆಗಳನ್ನು ಆರಂಭಿಕವಾಗಿಯೇ ಪತ್ತೆಹಚ್ಚುತ್ತದೆ. ತ್ವರಿತ ಮತ್ತು ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ನೆರವಾಗುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಕಾರ್ಯಕ್ರಮಗಳ ವಿರುದ್ಧ 'ಸುಳ್ಳು ಪ್ರಚಾರ' ಮಾಡುತ್ತಿದ್ದಾರೆ ಮತ್ತು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ವಿಧಾನಮಂಡಲ ಅಧಿವೇಶನವನ್ನು ಬಳಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಜನವರಿ 22 ರಿಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯ ವಿಧಾನಮಂಡಲ ವಿಶೇಷ ಅಧಿವೇಶನವನ್ನು ಕರೆದ ನಂತರ ಅವರ ಹೇಳಿಕೆಗಳು ಬಂದಿವೆ. ಈ ಅಧಿವೇಶನದಲ್ಲಿ ಯುಪಿಎ ಕಾಲದ ಉದ್ಯೋಗ ಖಾತರಿ ಯೋಜನೆಯಾದ MGNREGA ಯೋಜನೆಯ ಹೆಸರನ್ನು VB-G RAM G ಕಾಯ್ದೆ ಎಂದು ಬದಲಿಸುವ ಕೇಂದ್ರದ ನಿರ್ಧಾರದ ಕುರಿತು ಕುರಿತು ಚರ್ಚೆಯನ್ನು ವಿಶೇಷ ಅಧಿವೇಶನದಲ್ಲಿ ನಿಗದಿಪಡಿಸಲಾಗಿದೆ.
ಮಹಾರಾಷ್ಟ್ರ ಪುರಸಭೆ ಚುನಾವಣೆಯ ಫಲಿತಾಂಶಗಳು ಪ್ರಕಟವಾಗಿದ್ದು, ಬಿಜೆಪಿ ಮೈತ್ರಿಕೂಟ ಅಧಿಕಾರ ಪಡೆಯುವುದು ನಿಚ್ಚಳವಾಗಿದೆ. ಜಲ್ನಾ ಕಾರ್ಪೊರೇಷನ್‌ನ ವಾರ್ಡ್‌ನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಯಾಗಿದ್ದ ಶ್ರೀಕಾಂತ್ ಪಂಗಾರ್ಕರ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಶ್ರೀಕಾಂತ್ ಜಲ್ನಾದ ವಾರ್ಡ್ 13ರಿಂದ ಸ್ಪರ್ಧಿಸಿದರು. ಬಿಜೆಪಿ ಸೇರಿದಂತೆ ಇತರ ಪಕ್ಷಗಳ ಅಭ್ಯರ್ಥಿಗಳು ಕಣದಲ್ಲಿದ್ದರೆ. ಆದರೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.ಇನ್ನು ಚುನಾವಣೆ ಸೋಲಿಗೆ ಮತದಾನದ ವೇಳೆ, ಅಳಿಸಬಹುದಾದ ಶಾಯಿ ಹಾಕಿ ನಡೆಸಿರುವ ಅಕ್ರಮವೇ ಕಾರಣ ಎಂದು ಉದ್ಧವ್ ಠಾಕ್ರೆ ಆರೋಪಿಸಿದ್ದು, ಉದ್ಧವ್ ಠಾಕ್ರೆ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಧ್ವನಿಗೂಡಿಸಿದ್ದಾರೆ. ಬಿಎಂಸಿ ಸಮೀಕ್ಷೆಗಳು ಸ್ಯಾನಿಟೈಸರ್, ಅಸಿಟೋನ್ ಮತ್ತು ಇತರ ಏಜೆಂಟ್‌ಗಳಿಂದ ಅಳಿಸಲಾಗದ ಶಾಯಿಯನ್ನು ಸುಲಭವಾಗಿ ಅಳಿಸಿಹಾಕುವುದನ್ನು ತೋರಿಸುತ್ತವೆ, ಇದು ಚುನಾವಣಾ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ - ಮಹಾರಾಷ್ಟ್ರ ಮತ್ತು ಅದರಾಚೆಗೂ ಕಳವಳಗಳು ಪ್ರತಿಧ್ವನಿಸುತ್ತಿವೆ" ಎಂದು ಸಿಎಂ ಹೇಳಿದ್ದಾರೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದಿನಿಂದ 2 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಹತ್ವದ ಸಭೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಮೈಸೂರಿಗೆ ಬಂದು ಹೋದ ಬೆನ್ನಲ್ಲೇ ಡಿಕೆಶಿ ದೆಹಲಿ ಯಾತ್ರೆ ಕುತೂಹಲ ಕೆರಳಿಸಿದ್ದು, ಇದೀಗ ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಚಟುವಟಿಕೆಗಳು ಮತ್ತೆ ಗರಿಗೆದರಿವೆ. ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಅಸ್ಸಾಂ ಚುನಾವಣೆ ಹಿನ್ನಲೆಯಲ್ಲಿ ದೆಹಲಿಗೆ ತೆರಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ ಇದೇ ವೇಳೆ ರಾಜ್ಯ ರಾಜಕೀಯದ ಕುರಿತೂ ಮಹತ್ವದ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.