ಬಳ್ಳಾರಿ: ಪಾಮ್ ಆಯಿಲ್ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ, ಲಾರಿಯಲ್ಲಿದ್ದ ಎಣ್ಣೆ ರಸ್ತೆ ಮೇಲೆಲ್ಲಾ ಸೋರಿಕೆಯಾದ ಘಟನೆ ಬಳ್ಳಾರಿಯ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ದೇವಲಾಪುರ ಕಣಿವೆ ಮಾರೆಮ್ಮ ದೇವಸ್ಥಾನದ ಸಮೀಪ ಇಂದು ನಡೆದಿದೆ. ಘಟನೆಯ ವೇಳೆ ಲಾರಿಯಲ್ಲಿ ಚಾಲಕ ಹಾಗೂ ಕ್ಲೀನರ್ ಇದ್ದರೂ, ಅದೃಷ್ಟವಶಾತ್ ಪ್ರಾಣಾಪಾಯವಾಗದೆ ಪಾರಾಗಿದ್ದಾರೆ.
ರಸ್ತೆ ತಿರುವಿನಲ್ಲಿ ಲಾರಿ ಉರುಳಿ ಬಿದ್ದದ್ದು ಹೇಗೆ?
ದೇವಲಾಪುರ ಕಣಿವೆ ಬಳಿ ಇರುವ ತೀವ್ರ ತಿರುವಿನಲ್ಲಿ ಲಾರಿ ವೇಗ ನಿಯಂತ್ರಣ ತಪ್ಪಿದ್ದು, ಏಕಾಏಕಿ ರಸ್ತೆ ಬದಿಗೆ ಉರುಳಿಬಿದ್ದಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಟ್ಯಾಂಕರ್‌ಗೆ ಹಾನಿಯಾಗಿದ್ದು, ಅದರೊಳಗಿದ್ದ ಪಾಮ್ ಆಯಿಲ್ ರಸ್ತೆ ಹಾಗೂ ಪಕ್ಕದ ಜಾಗಗಳಿಗೆ ಹರಿದುಹೋಗಿದೆ.
ಸೋರಿಕೆಯಾದ ಆಯಿಲ್ ಸಂಗ್ರಹಕ್ಕೆ ಜನರ ಮುಗಿಬಿದ್ದಾಟ
ಲಾರಿಯಿಂದ ಎಣ್ಣೆ ಸೋರಿಕೆಯಾದ ಸುದ್ದಿ ಸುತ್ತಮುತ್ತಲಿನ ಗ್ರಾಮಗಳಿಗೆ ಹರಡುತ್ತಿದ್ದಂತೆ, ಪುರುಷರು, ಮಹಿಳೆಯರು, ಮಕ್ಕಳು ಬಕೆಟ್, ಪ್ಲಾಸ್ಟಿಕ್ ಬಿಂದಿಗೆ, ಡಬ್ಬ ವಿವಿಧ ಪಾತ್ರೆಗಳನ್ನು ಹಿಡಿದು ಸ್ಥಳಕ್ಕೆ ಧಾವಿಸಿದರು. ರಸ್ತೆ ಮೇಲೆ ಹರಿದಿದ್ದ ಪಾಮ್ ಆಯಿಲ್ ನ್ನು ಸಂಗ್ರಹಿಸಿಕೊಳ್ಳಲು ಜನರು ಮುಗಿಬಿದ್ದರು.
ಸ್ಥಳಕ್ಕೆ ಧಾವಿಸಿದ ಪೊಲೀಸರು
ಸ್ಥಳಕ್ಕೆ ಆಗಮಿಸಿದ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ರಸ್ತೆ ಮೇಲೆ ಜನಸಂದಣಿ ಹೆಚ್ಚಾದ ಕಾರಣ ವಾಹನ ಸಂಚಾರವೂ ಕೆಲಕಾಲ ಅಸ್ತವ್ಯಸ್ತಗೊಂಡಿತು. ಸಾರ್ವಜನಿಕ ಸುರಕ್ಷತೆ ಹಾಗೂ ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸರು ಕೈಗೊಂಡರು.