ನವದೆಹಲಿ: ಅಸ್ಸಾಂ ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ. ಖಂಡಿತವಾಗಿ ಅಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಕ್ಷ ಒಗ್ಗಟ್ಟಾಗಿ ಕೆಲಸ ಮಾಡಲಿದೆ. ಆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರವಾದ ಅಲೆಯಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಅಸ್ಸಾಂ ವಿಧಾನಸಭೆ ಚುನಾವಣೆ ಕುರಿತು ನಡೆದ ಸಭೆಯ ನಂತರ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದ ಬಳಿ ಮಾಧ್ಯಮಗಳಿಗೆ ಶುಕ್ರವಾರ ರಾತ್ರಿ ಪ್ರತಿಕ್ರಿಯೆ ನೀಡಿದರು. ನಮಗೆಲ್ಲರಿಗೂ ಚುನಾವಣೆ ನಿರ್ವಹಣೆ ಮಾಡಿ ಅನುಭವವಿದೆ. ನಾವೆಲ್ಲರೂ ಒಟ್ಟಾಗಿ ಅಸ್ಸಾಂನಲ್ಲಿ ಬದಲಾವಣೆಗಾಗಿ ಕೆಲಸ ಮಾಡುತ್ತೇವೆ. ಅಲ್ಲಿನ ಜನರ ಅಭಿಲಾಷೆಯೂ ಇದೇ ಆಗಿದೆ. ಗ್ಯಾರಂಟಿಯಾಗಿ ಸರ್ಕಾರ ಅಧಿಕಾರಕ್ಕೇರಲಿದೆ. ಸ್ಪಷ್ಟ ಸಂದೇಶವನ್ನು ನೀಡಲು ನಾವು ಬಯಸುತ್ತೇವೆ. ನಮ್ಮ ಕಾರ್ಯಕ್ರಮಗಳ ಬಗ್ಗೆ ತಿಳಿಸುತ್ತೇವೆ ಎಂದರು.
ಅಸ್ಸಾಂ ರಾಜ್ಯದಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡಿರುವವರು ಯುವಕರು. ಇಲ್ಲಿನ ಎಲ್ಲಾ ನಾಯಕರು ಬೆಂಬಲ ನೀಡುತ್ತಿದ್ದಾರೆ. ನಮ್ಮ ಒಗ್ಗಟ್ಟು ಸ್ಪಷ್ಟ ಸಂದೇಶವನ್ನು ನೀಡಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವದಲ್ಲಿ ಪಕ್ಷ ಮುನ್ನಡೆಯಲಿದೆ ಎಂದರು.
"ಭೂಪೇಶ್ ಬಘೇಲ್ ಅವರು ಯಾವ ಕಾರ್ಯತಂತ್ರಗಳನ್ನು ಚುನಾವಣೆಯಲ್ಲಿ ಅನುಸರಿಸಬೇಕು ಎಂದು ಸಲಹೆಗಳನ್ನು ನೀಡಿದ್ದಾರೆ. ಜೊತೆಗೆ ಸಭೆಯಲ್ಲಿ ಸಾಕಷ್ಟು ನಾಯಕರು ತಮ್ಮ ಆಲೋಚನೆಗಳನ್ನು ತಿಳಿಸಿದ್ದಾರೆ. ಪಕ್ಷದ ಪದಾಧಿಕಾರಿಗಳು ಅಸ್ಸಾಂನ ಪ್ರಸ್ತುತ ಸ್ಥಿತಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ" ಎಂದರು.