ದೆಹಲಿ: ಜನವರಿ 18ರಂದು ನಿಗದಿಯಾಗಿದ್ದ ವರ್ಲ್ಡ್ ಏಕನಾಮಿಕ್ ಫೋರಂ ಕಾರ್ಯಕ್ರಮದಲ್ಲಿ ಭಾಗವಹಿಸುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಪ್ರವಾಸವನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು ಹಾಗೂ ನವದೆಹಲಿಯಲ್ಲಿ ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಡಿಸಿಎಂ ಅವರ ಈ ಪ್ರವಾಸ ರದ್ದುಗೊಳಿಸಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅವರು ಅಸ್ಸಾಂ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಐಸಿಸಿ ಪದಾಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ ಹಾಗೂ ಮನ್ರೇಗಾ ಮರುಜಾರಿ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧದ ಅಭಿಯಾನದ ಜೊತೆಗೆ ಜ. 22ರಿಂದ ಆರಂಭವಾಗುವ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ಭಾಗವಹಿಸಬೇಕಾಗಿದೆ ಹೀಗಾಗಿ ದಾವೋಸ್ ಪ್ರವಾಸ ರದ್ಧು ಮಾಡಲಾಗಿದೆ ಎಂದು ಡಿಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.
ಉಪಮುಖ್ಯಮಂತ್ರಿಯವರ ಪ್ರಯಾಣದ ವೇಳಾಪಟ್ಟಿಯ ಪ್ರಕಾರ, ಅಸ್ಸಾಂನಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪೂರ್ವಸಿದ್ಧತಾ ಸಭೆಯಲ್ಲಿ ಭಾಗವಹಿಸಲು ದೆಹಲಿಯಲ್ಲಿದ್ದ ಶಿವಕುಮಾರ್ ಅವರು ಇಂದು ಸಂಜೆ ಉತ್ತರ ಕರ್ನಾಟಕದ ಬೀದರ್‌ಗೆ ಪ್ರಯಾಣಿಸಲಿದ್ದಾರೆ.
ಅವರು ನಿನ್ನೆ ತಡರಾತ್ರಿ ಬೀದರ್‌ನಲ್ಲಿ ತಮ್ಮ 102 ನೇ ವಯಸ್ಸಿನಲ್ಲಿ ನಿಧನರಾದ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
ನಂತರ, ಅವರು ರಾತ್ರಿ ಹೈದರಾಬಾದ್ ಮೂಲಕ ನವದೆಹಲಿಗೆ ಪ್ರಯಾಣಿಸಲಿದ್ದಾರೆ.
ಜನವರಿ 18 ರಿಂದ ನಿಗದಿಯಾಗಿದ್ದ ದಾವೋಸ್ ಶೃಂಗಸಭೆಯನ್ನು ಬಿಟ್ಟುಬಿಡುವ ನಿರ್ಧಾರ ಮತ್ತು ಶಿವಕುಮಾರ್ ದೆಹಲಿಗೆ ಮರಳಿರುವುದು ಪ್ರಸ್ತುತ ನಾಯಕತ್ವದ ಸ್ಥಿರತೆಯ ಬಗ್ಗೆ ಊಹಾಪೋಹಗಳಿಗೆ ಕಾರಣವಾಗಿದೆ.