ಬೆಂಗಳೂರು : ನಾಯಕತ್ವ ಬದಲಾವಣೆ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿದ್ದು, ರಾಹುಲ್ ಹಾಗೂ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಕಸರತ್ತು ನಡೆಸುತ್ತಿದ್ದಾರೆ.
ಅಸ್ಸಾಂ ವಿಧಾನಸಭೆ ಚುನಾವಣಾ ಸಿದ್ದತೆ ಹಿನ್ನೆಲೆಯಲ್ಲಿ ಎಐಸಿಸಿ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಭೆಯಲ್ಲಿ ವೀಕ್ಷಕರಾಗಿ ಡಿಕೆ ಶಿವಕುಮಾರ್ ಪಾಲ್ಗೊಂಡಿದ್ದರು. ಇದೀಗ ಮಾಜಿ ಸಚಿವ ಭೀಮಣ್ಣ ಖಂಡ್ರೆ ವಿಧಿವಶರಾದ ಹಿನ್ನೆಲೆಯಲ್ಲಿ ಡಿಕೆಶಿ ಅವರು ಹೈದರಾಬಾದ್ ಮೂಲಕ ಬೀದರ್ ಗೆ ಆಗಮಿಸಲಿದ್ದು, ಮತ್ತೆ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗುತ್ತಿದೆ.
ನಿನ್ನೆ ರಾಹುಲ್ ಮುಖಾಮುಖಿಯಾದರೂ ಚರ್ಚೆಗೆ ಪ್ರಯತ್ನ ಸಾಧ್ಯವಾಗಿಲ್ಲ. ಬದಲಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದೀಗ ಖರ್ಗೆ ಮೂಲಕ ರಾಹುಲ್ ಗಾಂಧಿ ಭೇಟಿಗೆ ಡಿಕೆ ಶಿವಕುಮಾರ್ ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.
ಈ ನಡುವೆ ಬೆಂಗಳೂರಿನಲ್ಲಿಂದು ಡಿಕೆ ಶಿವಕುಮಾರ್ ದೆಹಲಿ ಪ್ರವಾಸದ ಕುರಿತು ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಎಐಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಡಿಕೆ ಶಿವಕುಮಾರ್ ದೆಹಲಿಗೆ ಹೋಗಿದ್ದಾರೆ. ಅಸ್ಸಾಂ ಚುನಾವಣೆಯ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ ಮತ್ತು ಅದಕ್ಕೆ ಸಂಬಂಧಿಸಿದ ಚರ್ಚೆಗಾಗಿ ಅಲ್ಲಿಗೆ ಹೋಗಿದ್ದಾರೆ, ಇದನ್ನು ಹೊರತುಪಡಿಸಿ ಬೇರೆ ಯಾವುದೇ ವಿಷಯದ ಬಗ್ಗೆ ನನಗೆ ತಿಳಿದಿಲ್ಲ ಎಂದರು.
ಶಿಡ್ಲಘಟ್ಟ ಪ್ರಕರಣದಲ್ಲಿ ರಾಜೀವ್ ಗೌಡ ಬಂಧನ ವಿಳಂಬ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್,‘ರಾಜೀವಗೌಡ ಪತ್ತೆಗೆ ತಂಡ ರಚಿಸಿದ್ದು, ಶೋಧ ನಡೆಸುತ್ತಿದೆ, ಅವರನ್ನು ಪತ್ತೆ ಮಾಡಿ ಬಂಧಿಸಿ ಕರೆತರುತ್ತೇವೆ. ಕೆಪಿಸಿಸಿ ಅಧ್ಯಕ್ಷರು ರಾಜೇಗೌಡರಿಗೂ ನೋಟಿಸ್ ಜಾರಿ ಮಾಡಿದ್ದಾರೆ. ಪಕ್ಷದಲ್ಲಿ ಉಳಿಸಿಕೊಳ್ಳಬೇಕೋ ಅಥವಾ ತೆಗೆದುಹಾಕಬೇಕೋ ಎಂಬುದನ್ನು ಪಕ್ಷದ ನಾಯಕತ್ವ ನಿರ್ಧರಿಸುತ್ತದೆ ಎಂದು ಹೇಳಿದರು.
ಬಳ್ಳಾರಿಯಲ್ಲಿ ಬಿಜೆಪಿ ಇಂದು ನಡೆಸುತ್ತಿರುವ ಪ್ರತಿಭಟನೆ ವಿಷಯ ತಿಳಿದಿದೆ. ಇಲ್ಲಿಯವರೆಗೆ ನಾವು ಯಾವುದೇ ಅನುಮತಿ ನೀಡಿಲ್ಲ, ಇದನ್ನು ಸ್ಥಳೀಯ ಪೊಲೀಸರಿಗೆ ಬಿಟ್ಟಿದ್ದೇವೆ, ಪರಿಸ್ಥಿತಿಯನ್ನು ಅವಲೋಕಿಸಿ ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸೂಚನೆ ನೀಡಿದ್ದೇವೆ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಸ್ಥಳೀಯ ಪೊಲೀಸರೇ ಅಲ್ಲಿನ ಪರಿಸ್ಥಿತಿಯನ್ನು ನಿರ್ಧರಿಸಬೇಕು ಎಂದರು.