ಬೆಂಗಳೂರು: ಕಚೇರಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವಾಗಲೇ ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೊ ವೈರಲ್ ಆದ ಬೆನ್ನಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ (Ramachandra rao) ಅವರನ್ನು ಹುದ್ದೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಖಚಿತಪಡಿಸಿದ್ದಾರೆ.
ಇಂದು ಬೆಳಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ. ತನಿಖೆಯ ನಂತರ ಏನು ಬೇಕಾದರೂ ಆಗಬಹುದು. ಅವರನ್ನು ವಜಾಗೊಳಿಸಬಹುದು. ತಕ್ಷಣ ಕ್ರಮ ಕೈಗೊಳ್ಳಬೇಕಾಗಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಅವರು ಹಿರಿಯ ಅಧಿಕಾರಿ ಎಂಬ ಅಂಶವನ್ನು ನೋಡದೆ, ಯಾವುದೇ ಹಿಂಜರಿಕೆಯಿಲ್ಲದೆ ಕ್ರಮ ಕೈಗೊಂಡಿದ್ದೇವೆ.
ತನಿಖೆಯಲ್ಲಿ ಏನಾಗುತ್ತದೆ ಎಂಬುದನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಇಲಾಖೆ ಮಾತ್ರವಲ್ಲ, ಯಾವುದೇ ಇಲಾಖೆಯೂ ಇಂತಹ ಘಟನೆಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಅದಕ್ಕಾಗಿಯೇ ನಾವು ತಕ್ಷಣ ಕ್ರಮ ಕೈಗೊಂಡಿದ್ದೇವೆ. ಮುಖ್ಯಮಂತ್ರಿ ಕೂಡ ಅಸಮಾಧಾನಗೊಂಡಿದ್ದಾರೆ, ನನಗೂ ಅಸಮಾಧಾನವಿದೆ. ಇದು ಪೊಲೀಸ್ ಇಲಾಖೆಯಾಗಿರುವುದರಿಂದ ಖಂಡಿತಾ ಇಂತಹ ಕ್ರಮ ಒಪ್ಪಲು ಸಾಧ್ಯವಿಲ್ಲ ಎಂದರು.
ಭೇಟಿ ಮಾಡಿಲ್ಲ
ನಿನ್ನೆ ವಿಡಿಯೊ ವೈರಲ್ ಆದ ಬೆನ್ನಲ್ಲೇ ತಮ್ಮನ್ನು ಭೇಟಿ ಮಾಡಲು ರಾಮಚಂದ್ರ ರಾವ್ ಬಂದಿದ್ದರು ಎಂದು ಆಮೇಲೆ ಗೊತ್ತಾಯಿತು. ಆದರೆ ಇಂತಹ ಪರಿಸ್ಥಿತಿಯಲ್ಲಿ ನಾನು ಖಂಡಿತಾ ಅವರನ್ನು ಭೇಟಿ ಮಾಡುತ್ತಿರಲಿಲ್ಲ. ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಪೊಲೀಸ್ ಅಧಿಕಾರಿ ಇಂತಹ ನೀಚ ಕೆಲಸ ಮಾಡಿದ್ದರೆ ಅದನ್ನು ಖಂಡಿತಾ ಕ್ಷಮಿಸಲು ಸಾಧ್ಯವಿಲ್ಲ ಎಂದರು.
ಡಿಜಿಪಿ ರಾಮಚಂದ್ರ ರಾವ್ ಅವರು ಇದೇ ವರ್ಷ ಮೇ ತಿಂಗಳಲ್ಲಿ ಸೇವೆಯಿಂದ ನಿವೃತ್ತರಾಗುವವರಿದ್ದರು. ನಿವೃತ್ತಿ ಅಂಚಿನಲ್ಲಿ ಅವರ ವಿಡಿಯೊ ಹೊರಬಿದ್ದಿದ್ದು, ಅವರಿಗೆ ಭಾರೀ ಸಂಕಷ್ಟ ಮತ್ತು ಮುಜುಗರ ಉಂಟಾಗಿದೆ.
ಸಂತ್ರಸ್ತೆಯರು ಯಾರೆಂದು ಗೊತ್ತಾಗಿಲ್ಲ
ವೈರಲ್ ವಿಡಿಯೊದಲ್ಲಿ ರಾಮಚಂದ್ರ ರಾವ್ ಅವರ ಸಂಪರ್ಕದಲ್ಲಿದ್ದ ಮಹಿಳೆಯರು ಯಾರು ಎಂದು ಇದುವರೆಗೆ ಗೊತ್ತಾಗಿಲ್ಲ, ಯಾರೂ ಇದುವರೆಗೆ ದೂರು ನೀಡಿಲ್ಲ. ಆ ಬಗ್ಗೆ ಕೂಡ ತನಿಖೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವರು ಹೇಳಿದರು.
ಕೃತಕ ವಿಡಿಯೊ ಎಂದ ಡಿಜಿಪಿ
ನಿನ್ನೆ ಸೋಮವಾರ ಮಧ್ಯಾಹ್ನ ವಿಡಿಯೊ ವೈರಲ್ ಆಗುತ್ತಿದ್ದಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (DCRE) ತಮ್ಮ ಕಚೇರಿಯನ್ನು ದಿಢೀರ್ ತೊರೆದ ರಾಮಚಂದ್ರರಾವ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಲು ಪ್ರಯತ್ನಿಸಿದರು. ಆದರೆ, ಗೃಹ ಸಚಿವರು ಅನಾರೋಗ್ಯದ ಕಾರಣ ಹೇಳಿ ಭೇಟಿಗೆ ಅವಕಾಶ ನೀಡಿಲ್ಲ. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಡಿಜಿಪಿ ರಾಮಚಂದ್ರರಾವ್, ‘ವಿಡಿಯೊ ಕಂಡು ಆಘಾತವಾಗಿದೆ. ವೈರಲ್ ಆದ ವಿಡಿಯೊ ಕೃತಕವಾಗಿ ಸೃಷ್ಟಿಸಲಾಗಿದೆ. ಈ ಬಗ್ಗೆ ತನಿಖೆಯಾಗಬೇಕಿದೆ ಎಂದರು.
‘ಷಡ್ಯಂತ್ರ ರೂಪಿಸಿ ನಕಲಿ ವಿಡಿಯೊ ಹರಿಬಿಡಲಾಗಿದೆ. ಈ ಬಗ್ಗೆ ವಕೀಲರ ಜತೆ ಚರ್ಚೆ ನಡೆಸಿ ಕಾನೂನು ಹೋರಾಟ ನಡೆಸುತ್ತೇನೆ,’ ‘ಇದು ಹಳೆಯ ವಿಡಿಯೊ,’ ಎಂದ ರಾಮಚಂದ್ರ ರಾವ್, ‘ಎಂಟು ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಕೆಲಸ ಮಾಡಿದ್ದೆ,’ ಎಂದಷ್ಟೇ ಹೇಳಿ ಘಟನೆ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು.