ಬೆಂಗಳೂರು: ಕೇಂದ್ರ ಸಾರ್ವಜನಿಕ ಸೇವಾ ಆಯೋಗದ ಪ್ರಾದೇಶಿಕ ಕಚೇರಿಯನ್ನು ಬೆಂಗಳೂರಿನಲ್ಲಿ ಸ್ಥಾಪಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿದೆ.
ಈ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕೇಂದ್ರ ಸಿಬ್ಬಂದಿ, ಪಿಜಿ ಮತ್ತು ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕಾರ್ಯದರ್ಶಿ ರಚನಾ ಶಾ ಅವರಿಗೆ ಪತ್ರ ಬರೆದಿರುವ ಅವರು, ಬೆಂಗಳೂರಿನಲ್ಲಿ ಯುಪಿಎಸ್‌ಸಿ ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸುವುದು ವಿಕೇಂದ್ರೀಕರಣ, ಪ್ರಾದೇಶಿಕ ಸಮಾನತೆ ಮತ್ತು ಯುವ ಸಬಲೀಕರಣದ ಗುರಿ ಸಾಧಿಸಲು ಇಡುವ ಹೆಜ್ಜೆಯಾಗಿರಲಿದೆ.
ಇದು ಕರ್ನಾಟಕ ಮತ್ತು ದಕ್ಷಿಣ ರಾಜ್ಯಗಳು ಯುಪಿಎಸ್‌ಸಿ ಸೇವೆಗಳು ಮತ್ತು ಅವಕಾಶಗಳಿಗೆ ಸಮಾನ ಪ್ರವೇಶವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ. ಪರೀಕ್ಷೆಗಳು ಮತ್ತು ಇತರ ಪ್ರಕ್ರಿಯೆಗಳನ್ನು ನಡೆಸುವಲ್ಲಿ ಆಡಳಿತಾತ್ಮಕ ದಕ್ಷತೆಯನ್ನು ಸುಗಮಗೊಳಿಸುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿಯನ್ನು ಆದಷ್ಟು ಬೇಗ ಆರಂಭಿಸುವಂತೆ ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಸದಸ್ಯರೂ ಆಗಿರುವ ಮೋಹನದಾಸ್ ಅವರು ಮಾತನಾಡಿ, ಈ ಸಂಬಂಧ ನಾನೂ ಕೂಡ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಯುಪಿಎಸ್‌ಸಿ ಕಚೇರಿಯನ್ನು ಸ್ಥಾಪಿಸುವಂತೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಐಎಎಸ್ ತರಬೇತಿ ಕೇಂದ್ರದ ವಿನಯ್ ಕುಮಾರ್ ಜಿಬಿ ಅವರು ಮಾತನಾಡಿ, ಇದು ನಿಜವಾಗಿದ್ದೇ ಆದರೆ, ಯುಪಿಎಸ್‌ಸಿ ಇತಿಹಾಸದಲ್ಲಿ ಪ್ರಾದೇಶಿಕ ಕೇಂದ್ರವನ್ನು ಹೊಂದಿರುವ ಮೊದಲ ನಗರ ಬೆಂಗಳೂರು ಆಗಲಿದೆ. ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸಲು ಸಂವಿಧಾನದಲ್ಲಿ ಅವಕಾಶವಿದೆ. ಇದಲ್ಲದೆ, ಯುಪಿಎಸ್‌ಸಿ ನಡೆಸುವ ವಿವಿಧ ಪರೀಕ್ಷೆಗಳಿಗೆ, ವಿಶೇಷವಾಗಿ ನಾಗರಿಕ ಸೇವೆಗಳಿಗೆ ತಯಾರಿ ನಡೆಸಲು ಜಾಗೃತಿ ಮತ್ತು ಸಂಸ್ಕೃತಿಯನ್ನು ನಿರ್ಮಿಸಲು ಇದು ನಮಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.