ಬೆಂಗಳೂರು: ಎಲ್ಲಾ ಪದವಿ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಕನ್ನಡದ ಬದಲು ಇಂಗ್ಲಿಷ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.
ಬ್ರಿಟಿಷ್ ಕೌನ್ಸಿಲ್ ಮತ್ತು ಮೈಕ್ರೋಸಾಫ್ಟ್ ಇಂಡಿಯಾ ಜೊತೆಗಿನ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾತನಾಡಿದ ಸುಧಾಕರ್, ವಿದ್ಯಾರ್ಥಿಗಳು ಮನೆಗೆ ಹಿಂದಿರುಗಿದಾಗ ಅಥವಾ ಕ್ಯಾಂಪಸ್‌ನ ಹೊರಗೆ ಇದ್ದಾಗ ಕನ್ನಡದಲ್ಲಿ ಮಾತನಾಡಬಹುದು ಎಂದರು.
ಬ್ರಿಟಿಷ್ ಕೌನ್ಸಿಲ್, ಮೈಕ್ರೋಸಾಫ್ಟ್ ಸಹಯೋಗದಲ್ಲಿ 31 ಸರ್ಕಾರಿ ಪದವಿ, 29 ಪಾಲಿಟೆಕ್ನಿಕ್ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕೌಶಲ ಕಲಿಕೆ ಆರಂಭಿಸಲಾಗುತ್ತಿದ್ದು, 95,000 ವಿದ್ಯಾರ್ಥಿಗಳು ಪ್ರಯೋಜನ ಪಡೆಯಲಿದ್ದಾರೆ.
ಈಗಾಗಲೇ 16 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಗುಣಮಟ್ಟದ ಅಧ್ಯಯನ ಸಂಪನ್ಮೂಲಗಳು, ಡಿಜಿಟಲ್ ಸಾಧನಗಳು ಮತ್ತು ‘ಇಂಗ್ಲಿಷ್ ತರಬೇತಿ ಕ್ಲಬ್‌ಗಳ’ ಮೂಲಕ ಇಂಗ್ಲಿಷ್ ಅಭ್ಯಾಸದ ಅವಕಾಶಗಳು ಲಭ್ಯವಾಗಲಿವೆ. ದೇಶ–ವಿದೇಶಗಳಲ್ಲಿ ಉದ್ಯೋಗ ಪಡೆಯುವ ಅರ್ಹತೆ ಹೆಚ್ಚಾಗಲಿದೆ ಎಂದರು.
ಈ 54 ಸಂಸ್ಥೆಗಳಲ್ಲಿ 29 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 25 ಸರ್ಕಾರಿ ಪಾಲಿಟೆಕ್ನಿಕ್ ಸೇರಿವೆ. ಈ ಕಾರ್ಯಕ್ರಮದ ಮೂಲಕ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಪ್ರಥಮ ದರ್ಜೆ ಕಾಲೇಜುಗಳು ಮತ್ತು ಪಾಲಿಟೆಕ್ನಿಕ್‌ಗಳ ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನವನ್ನು ಮಾತ್ರವಲ್ಲದೆ ಸಂವಹನ ಕೌಶಲ್ಯವನ್ನೂ ಪಡೆಯುವುದನ್ನು ಸರ್ಕಾರ ಸೂಚಿಸಿದೆ.
ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಇರುವಾಗ ಇಂಗ್ಲಿಷ್‌ನಲ್ಲಿ ಮಾತನಾಡಬೇಕು. ಅಧ್ಯಾಪಕರೂ ಪರಸ್ಪರ ಸಂವಹನ ನಡೆಸಬೇಕು. ಉನ್ನತ ಶಿಕ್ಷಣದಲ್ಲಿ ಬೋಧನೆಯ ಮಾಧ್ಯಮ ಇಂಗ್ಲಿಷ್ ಆಗಿದ್ದರೂ ಹೆಚ್ಚಿನವರು ಇಂಗ್ಲಿಷ್ ಮಾತನಾಡುವುದಿಲ್ಲ. ಕಾಲೇಜಿನ ಒಳಗೆ ಇದ್ದಾಗ ಇಂಗ್ಲಿಷ್ ಮಾತನಾಡಬೇಕು. ಮನೆಗೆ ಹೋದಾಗ ಪೋಷಕರೊಂದಿಗೆ ತಮ್ಮ ಮಾತೃಭಾಷೆಯಲ್ಲೇ ಮಾತನಾಡಬಹುದು ಎಂದು ಹೇಳಿದರು.