ಮಂಗಳೂರು: ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 1997ರಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ “ದಂಡುಪಾಳ್ಯ ಗ್ಯಾಂಗ್” ನ ಸದಸ್ಯ ಚಿಕ್ಕ ಹನುಮ ಅಲಿಯಾಸ್ ಚಿಕ್ಕ ಹನುಮಂತಪ್ಪ ಎಂಬಾತನನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಬೆಂಗಳೂರು ಜಿಲ್ಲೆಯ ಹೊಸಕೋಟೆ ತಾಲೂಕಿನ ದಂಡುಪಾಳ್ಯ ಗ್ರಾಮದ ವೆಂಕಟಪ್ಪ ಎಂಬುವರ ಪುತ್ರ ಚಿಕ್ಕ ಹನುಮ ಎಂದು ಗುರುತಿಸಲಾಗಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಎಂಬಲ್ಲಿ ಉರ್ವಾ ಪೊಲೀಸರು ಆತನನ್ನು ಬಂಧಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಕ್ಟೋಬರ್ 11, 1997 ರ ಮಧ್ಯರಾತ್ರಿ ದಂಡುಪಾಳ್ಯ ತಂಡದ ಸದಸ್ಯರು ಮಂಗಳೂರಿನ ಉರ್ವ ಮಾರಿಗುಡಿ ಕ್ರಾಸ್ ಬಳಿಯ 'ಅನ್ವರ್ ಮಹಲ್' ಎಂಬ ಹೆಸರಿನ ಮನೆಗೆ ನುಗ್ಗಿ ಲೂಯಿಸ್ ಡಿ’ಮೆಲ್ಲೊ (80) ಮತ್ತು ರಂಜಿತ್ ವೇಗಸ್ (19) ಅವರನ್ನು ಬರ್ಬರವಾಗಿ ಹತ್ಯೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದರು.
ತನಿಖೆಯ ನಂತರ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ತರುವಾಯ ಬೆಂಗಳೂರಿನ 34 ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಧೀಶರು (ವಿಶೇಷ ನ್ಯಾಯಾಲಯ) ದೊಡ್ಡ ಹನುಮ ಸೇರಿದಂತೆ ಐವರು ಆರೋಪಿಗಳಿಗೆ ಶಿಕ್ಷೆ ವಿಧಿಸಿದ್ದರು. ಆದರೆ, ಹನುಮ ತನ್ನ ಹೆಸರನ್ನು ಬದಲಾಯಿಸಿಕೊಂಡು ಆಂಧ್ರಪ್ರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರಿನ ಜೆಎಂಎಫ್‌ಸಿ II ನ್ಯಾಯಾಲಯ 2010 ರಲ್ಲಿ ಆತನ ವಿರುದ್ಧ ಸುದೀರ್ಘ ಬಾಕಿಯಿರುವ ಪ್ರಕರಣ (ಎಲ್‌ಪಿಸಿ) ವಾರಂಟ್ ಹೊರಡಿಸಿತ್ತು.ಆರೋಪಿಯು ಕರ್ನಾಟಕದಾದ್ಯಂತ ಸುಮಾರು 13 ಕೊಲೆ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದ್ದು, ಹೆಚ್ಚಿನ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಉರ್ವ ಠಾಣೆ ಇನ್ಸ್ ಪೆಕ್ಟರ್ ಶ್ಯಾಮ್ ಸುಂದರ್ ಎಚ್.ಎಂ., ಪಿಎಸ್ ಐ ಗುರಪ್ಪ ಕಾಂತಿ, ಪಿಎಸ್ ಐ ಎಲ್.ಮಂಜುಳಾ, ಎಎಸ್ ಐ ವಿನಯ್ ಕುಮಾರ್, ಸಿಬ್ಬಂದಿಗಳಾದ ಲಲಿತಾಲಕ್ಷ್ಮಿ, ಅನಿಲ್, ಪ್ರಮೋದ್, ಅತಾನಂದ್, ಹರೀಶ್ ಇದ್ದರು. ಅಧಿಕಾರಿಗಳು ಮತ್ತು ಸಿಬ್ಬಂದಿಯ ಶ್ರಮವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದು, ಅತ್ಯುನ್ನತ ಬಹುಮಾನ ನೀಡಲು ಡಿಜಿಪಿಗೆ ಶಿಫಾರಸು ಮಾಡಿದ್ದಾರೆ.