ಬೆಂಗಳೂರು: ಇಂದು ಗುರುವಾರ ಆರಂಭವಾದ ವಿಧಾನಸಭೆಯ ವಿಶೇಷ ಅಧಿವೇಶನದ ವೇಳೆ ಜಂಟಿ ಅಧಿವೇಶನ ಉದ್ದೇಶಿಸಿ ಸರ್ಕಾರ ಕೊಟ್ಟ ಭಾಷಣ ಓದುವ ಬದಲು ತಾವೇ ಬರೆದು ತಂದ ಭಾಷಣ ಆರಂಭಿಸಿ ಕೇವಲ ಒಂದೇ ವಾಕ್ಯ ಓದಿ ಮುಗಿಸಿ ಹೊರಟ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಕಾಂಗ್ರೆಸ್ ಸದಸ್ಯರು ತೀವ್ರವಾಗಿ ಖಂಡಿಸಿ ಟೀಕಿಸುತ್ತಿದ್ದಾರೆ.
ಅವರು ಹೊರಹೋಗುತ್ತಿದ್ದ ವೇಳೆ ಕಾಂಗ್ರೆಸ್ ನಾಯಕರಾದ ಬಿ ಕೆ ಹರಿಪ್ರಸಾದ್ ಮತ್ತು ಇತರ ಶಾಸಕರು ಅಡ್ಡಿಗಟ್ಟಿರುವುದನ್ನು ಖಂಡಿಸಿರುವ ವಿಪಕ್ಷ ನಾಯಕ ಆರ್ ಅಶೋಕ್, ಇದೊಂದು ‘ಕರಾಳ ದಿನ’ ಎಂದು ಕರೆದಿದ್ದಾರೆ. ವಿಧಾನಸೌಧ ಮುಂದೆ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ ಪ್ರಕಾರ ರಾಜ್ಯಪಾಲರು ತಮ್ಮ ಕರ್ತವ್ಯ ನಿರ್ವಹಿಸಿ ಧನ್ಯವಾದ ಹೇಳಿ ಹೊರಟಿದ್ದಾರೆ.
ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ರಾಜ್ಯಪಾಲರು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಿದ್ದು, ಅವರ ಭಾಷಣವನ್ನು ಓದದೇ ಹೊರಡುವುದಕ್ಕೂ ಅವರಿಗೆ ಅಧಿಕಾರವಿದೆ. ಆದರೆ ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರನ್ನು ಅಡ್ಡಗಟ್ಟಿ ಅಗೌರವ ತೋರಿಸಿದ್ದು ಗೂಂಡಾಗಿರಿ ಎಂದು ಕಿಡಿಕಾರಿದರು. ಅಧಿವೇಶನವನ್ನು ಕಾಂಗ್ರೆಸ್ ಕರಾಳ ರೀತಿಯಲ್ಲಿ ನಡೆಸಿದೆ ಎಂದು ಆರೋಪಿಸಿದರು.
ಸದನದಲ್ಲಿ ಅಗೌರವ, ಸ್ಪೀಕರ್ ಗೆ ದೂರು
ರಾಜ್ಯಪಾಲರಿಗೆ ಅಡ್ಡಿಪಡಿಸಿದ ಶಾಸಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅಶೋಕ್, ಈ ಕುರಿತು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ದೂರು ಸಲ್ಲಿಸಿದ್ದಾರೆ. ಸದನದಲ್ಲಿ ಅಗೌರವ ತೋರಿದವರನ್ನು ಹೊರಹಾಕಬೇಕು ಎಂದೂ ಒತ್ತಾಯಿಸಿದರು. ಇದೇ ರಾಜ್ಯಪಾಲರು ಸರ್ಕಾರದ ಅನೇಕ ಬಿಲ್‌ಗಳಿಗೆ ಸಹಿ ಹಾಕಿದ್ದಾರೆ. ಆಗ ರಾಜ್ಯಪಾಲರು ಸರಿಯಾಗಿದ್ದರಾ ಎಂದು ಅಶೋಕ್ ಸರ್ಕಾರವನ್ನು ಪ್ರಶ್ನಿಸಿದರು.
ದೂರಿನಲ್ಲೇನಿದೆ? ನಿಯಮ 27ರ ಉಲ್ಲಂಘನೆ
ರಾಜ್ಯಪಾಲರಿಗೆ ಅಡ್ಡಿಪಡಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಆರ್. ಅಶೋಕ್, ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ-27 ನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ.
ಸಂವಿಧಾನದ 175 ಅಥವಾ 176ನೇ ಅನುಚ್ಛೇದದಡಿ ರಾಜ್ಯಪಾಲರು ಭಾಷಣ ಮಾಡುವಾಗ ಅಥವಾ ನಿರ್ಗಮಿಸುವಾಗ ಯಾವುದೇ ಸದಸ್ಯರು ಅಡ್ಡಿ ಅಥವಾ ವಿಘ್ನ ಉಂಟುಮಾಡುವುದು ಸದನದ ಆದೇಶದ ತೀವ್ರ ಉಲ್ಲಂಘನೆಯಾಗುತ್ತದೆ. ರಾಜ್ಯಪಾಲರು ನಿರ್ಗಮಿಸುವಾಗ ಅವರನ್ನು ಅಡ್ಡಗಟ್ಟಿ, ತಳ್ಳಾಡಿ ಅಗೌರವ ತೋರಿದ ಸದಸ್ಯರ ವಿರುದ್ಧ ಕೂಡಲೇ ಶಿಸ್ತು ಕ್ರಮ ಜರುಗಿಸಬೇಕು' ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಲೋಕಭವನವನ್ನು ಕಾಂಗ್ರೆಸ್ ಭವನವನ್ನಾಗಿಸಲು ‘ಕೈ’ ಸರ್ಕಾರ ಹೊರಟಿದೆ. ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸುವ ಕುತಂತ್ರ ಇದಾಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಹಾಗೂ ದ್ವೇಷ ರಾಜಕಾರಣ ಮಾಡಲು ಸದನವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಟೀಕಿಸಿದರು.