ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರು ಭಾಗಿಯಾಗಿರುವ ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಬೆಂಗಳೂರು ವಲಯ ಕಚೇರಿ ಬುಧವಾರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ 10 ಸ್ಥಿರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ.
ಈ ಆಸ್ತಿಗಳಲ್ಲಿ ಮುಡಾದಿಂದ ಅಕ್ರಮವಾಗಿ ಹಂಚಿಕೆಯಾದ ಆರು ನಿವೇಶನಗಳು, ಮೂರು ಸ್ಥಿರಾಸ್ತಿಗಳು ಮತ್ತು 20.85 ಕೋಟಿ ರೂ. ಮಾರುಕಟ್ಟೆ ಮೌಲ್ಯದ ಒಂದು ವಾಣಿಜ್ಯ ಕಟ್ಟಡ ಸೇರಿವೆ.
ಮೈಸೂರಿನ ಲೋಕಾಯುಕ್ತ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧಾರದ ಮೇಲೆ, ಮುಡಾ ನಿವೇಶನಗಳ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ತನಿಖೆ ಆರಂಭಿಸಿದೆ ಎಂದು ಗುರುವಾರ ಜಾರಿ ನಿರ್ದೇಶನಾಲಯದ ಹೇಳಿಕೆ ತಿಳಿಸಿದೆ.
2024ರ ಅಕ್ಟೋಬರ್ 18 ಮತ್ತು 28 ರಂದು ED ನಡೆಸಿದ ದಾಳಿಯಲ್ಲಿ, ಸರ್ಕಾರಿ ಆದೇಶಗಳು ಮತ್ತು ಇತರ ಹಲವಾರು ನಿಯಮಗಳನ್ನು ಉಲ್ಲಂಘಿಸಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಪತ್ತೆಯಾಗಿದೆ. 'ಈ ಶೋಧದಲ್ಲಿ ಮುಡಾ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ನಡುವೆ ಆಳವಾದ ಸಂಬಂಧವಿರುವುದು ಪತ್ತೆಯಾಗಿದೆ. ನಿವೇಶನ ಹಂಚಿಕೆಗೆ ಪರಿಹಾರವಾಗಿ ಮತ್ತು ಲೇಔಟ್‌ಗಳ ಅನುಮೋದನೆಗೆ ನಗದು ಪಾವತಿ ಮಾಡಿರುವುದು ಪತ್ತೆಯಾಗಿದೆ' ಎಂದು ಸಂಸ್ಥೆ ತಿಳಿಸಿದೆ.
ಈ ಹಿಂದೆ, ತನಿಖಾ ಸಂಸ್ಥೆಯು 'ಅಕ್ರಮವಾಗಿ' ಹಂಚಿಕೆ ಮಾಡಲಾದ ಮುಡಾದ 283 ನಿವೇಶನಗಳು ಮತ್ತು ಮೂರು ವೈಯಕ್ತಿಕ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿತ್ತು.
'ಮುಡಾ ನಿವೇಶನಗಳನ್ನು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿದ್ದ ಮಾಜಿ ಮುಡಾ ಆಯುಕ್ತ ಜಿಟಿ ದಿನೇಶ್ ಕುಮಾರ್ ಅವರನ್ನು ಕಳೆದ ವರ್ಷ ಸೆಪ್ಟೆಂಬರ್ 16 ರಂದು ಪಿಎಂಎಲ್‌ಎ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಯಿತು.
'ತನಿಖೆಯಲ್ಲಿ ಅಪರಾಧದಿಂದ ಬಂದ ಆದಾಯವನ್ನು ಅವರ ಸಂಬಂಧಿಕರು/ಸಹವರ್ತಿಗಳ ಹೆಸರಿನಲ್ಲಿ ಸ್ಥಿರಾಸ್ತಿಗಳನ್ನು ಖರೀದಿಸಲು ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಬಳಸಲಾಗಿದೆ. ಮುಡಾದ ಮಾಜಿ ಅಧ್ಯಕ್ಷ ಎಸ್.ಕೆ. ಮರಿಗೌಡ ಅವರು ತಾವು ಮಾಡಿದ ಅಕ್ರಮ ಹಂಚಿಕೆಗಳಿಗಾಗಿ ನಿವೇಶನಗಳ ರೂಪದಲ್ಲಿಯೇ ಲಾಭ ಪಡೆದಿದ್ದಾರೆ ಎಂಬುದು ತಿಳಿದುಬಂದಿದೆ. ಪ್ರಕರಣದಲ್ಲಿ ಇದುವರೆಗೆ ಸುಮಾರು ₹460 ಕೋಟಿ ಮಾರುಕಟ್ಟೆ ಮೌಲ್ಯದ ಅಪರಾಧದಿಂದ ಬಂದ ಆದಾಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ' ಎಂದು ಇ.ಡಿ ತಿಳಿಸಿದೆ.