ಕೊಪ್ಪಳ: ವಿದೇಶಿ ಮಹಿಳೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು "ಸಣ್ಣ ಘಟನೆ" ಎಂದು ಸಂಸದ ರಾಜಶೇಖರ್ ಹಿಟ್ನಾಳ್ ಅವರು ಕರೆದಿದ್ದು, ಹೇಳಿಕೆ ಕುರಿತು ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಕೊಪ್ಪಳದ ಜಿಲ್ಲಾಡಳಿತ ಭವನದ ಆವರಣದಲ್ಲಿ ಕೇಂದ್ರ ಮತ್ತು ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ “ಕೊಪ್ಪಳವನ್ನು ಅನ್ವೇಷಿಸಿ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಈ ಹೇಳಿಕೆ ನೀಡಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಈ ಹಿಂದೆ ಅತ್ಯಾಚಾರ-ಕೊಲೆ ನಡೆದಿತ್ತು, ಮಾಧ್ಯಮಗಳು ಈ ಒಂದು ಸಣ್ಣ ಘಟನೆಯನ್ನು ದೊಡ್ಡದಾಗಿ ಪ್ರಸಾರ ಮಾಡಿದವು. ಇದರಿಂದ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಬಳಿಕ ಸೂಕ್ಷ್ಮತೆಯನ್ನು ಅರಿತ ಅವರು, ಹೇಳಿಕೆಗೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದರು. ಅದು ದೊಡ್ಡ ಘಟನೆ. ಆ ಘಟನೆ ಆಗಬಾರದಿತ್ತು. ಅದು ತುಂಬಾ ನೋವಿನ ಸಂಗತಿ” ಎಂದು ಹೇಳಿದರು. ಜೊತೆಗೆ, ಆ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಪ್ರಚಾರ ಪಡೆದಿದ್ದು, ಅದರ ಪರಿಣಾಮ ಜಿಲ್ಲೆಗೆ ಗಂಭೀರವಾಗಿಯೇ ತಟ್ಟಿದೆ ಎಂದು ತಿಳಿಸಿದರು.
ಈ ಘಟನೆಯಿಂದಾಗಿ ಕೊಪ್ಪಳ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಕ್ಕೆ ಭಾರೀ ಹೊಡೆತ ಬಿದ್ದಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಶೇಕಡಾ 50ರಷ್ಟು ಇಳಿಕೆ ಕಂಡುಬಂದಿದೆ. “ನಮ್ಮಲ್ಲಿ ಅನೇಕ ಪ್ರವಾಸಿ ತಾಣಗಳಿವೆ. ಆದರೆ, ಅವುಗಳಿಗೆ ಸೂಕ್ತ ಪ್ರಚಾರ ಸಿಗುತ್ತಿಲ್ಲ. ಒಂದು ಘಟನೆ ನಡೆದರೆ ಮಾತ್ರ ನೆಗೆಟಿವ್ ಆಗಿ ಪ್ರಚಾರವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ ವರ್ಷದ ಮಾರ್ಚ್ ತಿಂಗಳಿನಲ್ಲಿ ಐವರು ಪ್ರವಾಸಿಗರ ತಂಡ ಸಣಾಪುರ ಕೆರೆ ಬಳಿ ತೆರಳಿದ್ದಾಗ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು.
ಅಮೇರಿಕಾದ ಡೇನಿಯಲ್ ಸೇರಿದಂತೆ ಮೂವರು ಪ್ರವಾಸಿಗರನ್ನು ತುಂಗಭದ್ರಾ ಎಡದಂಡೆ ಕಾಲುವೆಗೆ ತಳ್ಳಲಾಗಿತ್ತು. ಈ ವೇಳೆ ಒಡಿಶಾ ಮೂಲದ ಬಿಬಾಶ್ ಎಂಬುವವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಇದೇ ವೇಳೆ ಇಸ್ರೇಲ್ ಮೂಲದ ಮಹಿಳೆ ಮತ್ತು ಸ್ಥಳೀಯ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಲಾಗಿತ್ತು.
ಹಿಟ್ನಾಳ್ ವಿರುದ್ಧ BJP ಕಿಡಿ
ಏತನ್ಮಧ್ಯೆ ರಾಜಶೇಖರ್ ಹಿಟ್ನಾಳ್ ಅವರ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂಬುದಕ್ಕೆ ಅತ್ಯಾಚಾರ ಮತ್ತು ಕೊಲೆಗಳು 'ಸಣ್ಣ ವಿಚಾರ' ಎಂದು ಕಾಂಗ್ರೆಸ್ ಸಂಸದನ ಬಾಯಿಂದ ಹೊರಬಿದ್ದ ಶಬ್ದಗಳು ಸಾಕ್ಷಿ ಒದಗಿಸುತ್ತಿದೆ. ರಾಜ್ಯದಲ್ಲಿ ಅಪರಾಧಿಗಳಿಗೆ ಭಯವಿಲ್ಲದಂತಾಗಿದೆ, ಕಾಂಗ್ರೆಸ್ ಪಕ್ಷದ ನಾಯಕರು ಇಂತಹ ಭೀಕರ ಕೃತ್ಯಗಳನ್ನು ಲಘುವಾಗಿ ಪರಿಗಣಿಸುತ್ತಿರುವುದು ಆಡಳಿತ ವ್ಯವಸ್ಥೆಯ ದಿವಾಳಿತನವನ್ನು ತೋರಿಸುತ್ತದೆ ಎಂದು ಕಿಡಿಕಾರಿದೆ,
ಅತ್ಯಾಚಾರ ಮತ್ತು ಕೊಲೆಗಳು 'ಸಣ್ಣ ವಿಚಾರ' ಎಂದಾದರೆ, ಸಾಮಾನ್ಯ ಜನರಿಗೆ ರಕ್ಷಣೆ ಎಲ್ಲಿದೆ? ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಮಹಿಳೆಯರ ಜೀವಕ್ಕೆ ಬೆಲೆ ಇಲ್ಲದಂತಾಗಿರುವ ಈ ಪರಿಸ್ಥಿತಿಗೆ ಕಾಂಗ್ರೆಸ್ ನಾಯಕರ ಬೇಜವಾಬ್ದಾರಿ ಹೇಳಿಕೆಗಳೇ ಕುಮ್ಮಕ್ಕು ನೀಡುತ್ತಿವೆ. ಹೆಣ್ಣು ಮಗಳೊಬ್ಬಳು ಅಮಾನವೀಯವಾಗಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಯಾಗಿರುವ ಘಟನೆ ಯಾವ ದೃಷ್ಟಿಯಲ್ಲಿ ಸಣ್ಣ ವಿಚಾರ ಎಂಬುದನ್ನು ಕಾಂಗ್ರೆಸ್ ನಾಯಕರೇ ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದೆ.