ಬೆಂಗಳೂರು: 77ನೇ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 26ರಂದು ಬೆಂಗಳೂರಿನ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಪರೇಡ್‌ನ್ನು ಬೆಂಗಳೂರು ನಗರ ಜಿಲ್ಲಾಡಳಿತ ಮಂಡಳಿ ಆಯೋಜಿಸಿದೆ.
ಈ ಬಾರಿ ಪರೇಡ್‌ನಲ್ಲಿ ಒಟ್ಟು 37 ಸೇನಾ ತುಕಡಿಗಳು (troops) ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಆದರೆ, ಪ್ರತಿ ವರ್ಷದ ಜನಪ್ರಿಯ ಆಕರ್ಷಣೆಯಾಗಿರುವ ASC ಸೆಂಟರ್‌ನ ‘ಟೊರ್ನಾಡೋ’ ಬೈಕ್ ಸಾಹಸ ತಂಡ ಈ ಬಾರಿ ಪರೇಡ್‌ನಲ್ಲಿ ಭಾಗವಹಿಸುತ್ತಿಲ್ಲ. ಕಾರ್ಯಕ್ರಮದ ಸಮಯ ಮಿತಿ ಹಾಗೂ ಟಾರ್ನಡೋಸ್ ತಂಡವನ್ನು ಬೇರೆ ಕಡೆ ನಿಯೋಜಿಸಿರುವ ಕಾರಣದಿಂದಾಗಿ ಈ ಬಾರಿ ಬೈಕ್ ಸಾಹಸ ಪ್ರದರ್ಶನ ಇಲ್ಲದಂತಾಗಿದೆ.
ಕಾರ್ಯಕ್ರಮವು ಬೆಳಗ್ಗೆ 8.58ಕ್ಕೆ ಆರಂಭವಾಗಲಿದ್ದು, ಬೆಳಗ್ಗೆ 9 ಗಂಟೆಗೆ ರಾಜ್ಯಪಾಲರು ಆಗಮಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಗಣರಾಜ್ಯೋತ್ಸವ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮವು ಬೆಳಗ್ಗೆ 11 ಗಂಟೆಗೆ ಮುಕ್ತಾಯಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಮಾತನಾಡಿ, ಪ್ರವೇಶ ಪಾಸ್‌ಗಳು, ಪ್ರವೇಶ–ನಿರ್ಗಮನ ವ್ಯವಸ್ಥೆ, ಸಿಸಿಟಿವಿ ಅಳವಡಿಕೆ ಸೇರಿದಂತೆ ಎಲ್ಲಾ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ ಎಂದು ಹೇಳಿದರು.
ಪರೇಡ್‌ನಲ್ಲಿ ಸೇನೆ, ವಾಯುಪಡೆ, ಸಿಆರ್‌ಪಿಎಫ್ ಮಹಿಳಾ ಪಡೆ, ತಮಿಳುನಾಡು ರಾಜ್ಯ ಪೊಲೀಸ್ ಪಡೆ ಸೇರಿದಂತೆ ಹೊರರಾಜ್ಯದ ಪಡೆಗಳು, ಸ್ಕೌಟ್ಸ್ ಅಂಡ್ ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಉಳಿದಂತೆ 7 ಬ್ಯಾಂಡ್ ತಂಡಗಳು ಭಾಗವಹಿಸಲಿವೆ. ಇದಲ್ಲದೆ, ಸುಮಾರು 1,400 ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ವಿಜೇತರಿಗೆ ರಾಜ್ಯಪಾಲರು ಬಹುಮಾನ ವಿತರಣೆ ಮಾಡಲಿದ್ದಾರೆ.
ಕಾರ್ಯಕ್ರಮ ವೀಕ್ಷಿಸಲು ಸುಮಾರು 10 ಸಾವಿರಕ್ಕೂ ಹೆಚ್ಚಿನ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಅತಿಗಣ್ಯರಿಗೆ ಮೂರು ಸಾವಿರ, ಆಡಳಿತಾಧಿಕಾರಿಗಳು, ಮಾಧ್ಯಮದವರಿಗೆ 3,200, ಸಾರ್ವಜನಿಕರಿಗೆ ನಾಲ್ಕು ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತ ಸೀಮಂತ್‌ಕುಮಾರ್ ಸಿಂಗ್ ಮಾತನಾಡಿ, ಗಣರಾಜ್ಯೋತ್ಸವ ಕಾರ್ಯಕ್ರಮದಂದು ಭದ್ರತೆಗಾಗಿ ಎರಡು ಸಾವಿರಕ್ಕೂ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಮಾಣೆಕ್ ಶಾ ಪರೇಡ್ ಮೈದಾನದ ಸುತ್ತಲೂ 100ಕ್ಕೂ ಹೆಚ್ಚಿನ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಬಿಗಿ ಭದ್ರತೆ ಒದಗಿಸ ಲಾಗುತ್ತಿದೆ ಗಣ್ಯರ ಓಡಾಟ ಹೆಚ್ಚಿರುವ ಕಾರಣದಿಂ ದಾಗಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 8.30ರಿಂದ 10-30ರವರೆಗೆ ಕಬ್ಬನ್ ರಸ್ತೆಯ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗಿನ ಎರಡೂ ದಿಕ್ಕುಗಳಲ್ಲೂ ವಾಹನ ಸಂಚಾರ ನಿರ್ಬಂಧಿಸಲಾಗಿದೆ ಎಂದರು.
ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಿಸಲು ಬರುವ ಸಾರ್ವಜನಿಕರಿಗೆ ಸುಲಭವಾಗಿ ಪಾಸ್‌ಗಳನ್ನು ನೀಡುವ ಉದ್ದೇಶದೊಂದಿಗೆ ಇ-ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಆಸಕ್ತರು ಸೇವಾವಿಂದು ಪೋರ್ಟಲ್‌ನಲ್ಲಿ ಆಧಾರ್ ಸಂಖ್ಯೆ ಸೇರಿದಂತೆ ಮತ್ತಿತರ ಸೂಕ್ತ ದಾಖಲೆಗಳನ್ನು ನೀಡಿ ಪಾಸ್ ಪಡೆಯಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಒಟ್ಟು 2 ಸಾವಿರ ಇ-ಪಾಸ್‌ಗಳನ್ನು ನೀಡಲಾಗಿದೆ.