ಬೆಂಗಳೂರು: ರಾಜ್ಯದಲ್ಲಿ 76ನೇ ಗಣರಾಜ್ಯೋತ್ಸವದ ಸಂಭ್ರಮ ಜೋರಾಗಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲ ಗೆಹ್ಲೋಟ್ ಅವರಿಗೆ ಕೈಮುಗಿದು ಸ್ವಾಗತಿಸಿದರು. ಇದು ವಿಧಾನಸಭೆಯ ಭಾಷಣ ವಿವಾದದ ನಂತರ ಸಿಎಂ ಮತ್ತು ಗವರ್ನರ್ ನಡುವೆ ನಡೆದ ಮೊದಲ ಮುಖಾಮುಖಿಯಾಗಿತ್ತು.
ಬೆಳಗ್ಗೆ 9 ಗಂಟೆಗೆ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಅವರು ಪೊಲೀಸ್ ತುಕಡಿಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು.
ಗೆಹ್ಲೋಟ್ ಅವರು ಧ್ವಜ ಹಾರಿಸಿದ ನಂತರ ರಾಜ್ಯದ ಜನರಿಗೆ ವಿಶೇಷ ಸಂದೇಶ ನೀಡಿದರು. ಗಣರಾಜ್ಯೋತ್ಸವದ ಶುಭಾಶಯಗಳನ್ನು ತಿಳಿಸಿದ ಅವರು ರಾಜ್ಯದ ಅಭಿವೃದ್ಧಿ, ಜನಕಲ್ಯಾಣ ಕಾರ್ಯಕ್ರಮಗಳು ಮತ್ತು ಭವಿಷ್ಯದ ಗುರಿಗಳ ಬಗ್ಗೆ ಮಾತನಾಡಿದರು. ಭಾಷಣದಲ್ಲಿ ರಾಜ್ಯ ಸರ್ಕಾರದ ಎರಡೂವರೆ ವರ್ಷಗಳ ಸಾಧನೆಗಳನ್ನು ಉಲ್ಲೇಖಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ವಿರುದ್ಧ ಯಾವುದೇ ತೀವ್ರ ಟೀಕೆ ಅಥವಾ ವಿವಾದಾತ್ಮಕ ಹೇಳಿಕೆಗಳು ಇರಲಿಲ್ಲ.