ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾದ ಬ್ಯಾನರ್ ತೆರವು ವಿಚಾರಕ್ಕೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾಗೌಡಗೆ ಕರೆ ಮಾಡಿ ಅವಾಚ್ಯ ಪದಗಳಿಂದ ನಿಂದಿಸಿ, ಧಮ್ಕಿ ಹಾಕಿದ್ದ ರಾಜೀವ್ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.
ರಾಜೀವಗೌಡ ವಿರುದ್ಧ ವಿರುದ್ಧ ಪ್ರಕರಣ ದಾಖಲಾಗಿ 13 ದಿನ ಕಳೆದರೂ ಆತನನ್ನು ಬಂಧಿಸದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ನಿನ್ನೆ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕೇರಳ ಗಡಿಯಲ್ಲಿ ಆರೋಪಿ ರಾಜೀವ್ ಗೌಡನನ್ನು ಬಂಧಿಸುವಲ್ಲಿ ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಜನವರಿ 14ರಂದು ತನ್ನ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೇ ರಾಜೀವ್ ಗೌಡ ತಲೆಮರೆಸಿಕೊಂಡಿದ್ದನು.
ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿತ್ತು. ಅಲ್ಲದೆ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದುಪಡಿಸುವಂತೆ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ.ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತಿರಸ್ಕರಿಸಿದ್ದು ರಾಜೀವ್ ಗೌಡರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ರಾಜೀವ್ ಗೌಡನನ್ನು ಪೊಲೀಸರು ಇನ್ನೂ ಬಂಧಿಸದ ಬಗ್ಗೆ ಸ್ವಪಕ್ಷ ಕಾಂಗ್ರೆಸ್ನಲ್ಲಿಯೇ ಆಕ್ರೋಶ ಭುಗಿಲೆದ್ದಿತ್ತು. ಈ ಪ್ರಕರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ರಾಜೀವ್ ಗೌಡನನ್ನು ಪಕ್ಷದಿಂದ ಅಮಾನತುಗೊಳಿಸಿ ಶಿಸ್ತು ಸಮಿತಿಗೆ ಆದೇಶ ಹೊರಡಿಸಿದೆ.