ಉಡುಪಿ: ಮಲ್ಪೆ ಬಳಿ ದೋಣಿ ಮುಳುಗಿ ಮೂವರು ಸಾವನ್ನಪ್ಪಿದ ನಂತರ ಎಚ್ಚೆತ್ತ ಉಡುಪಿ ಜಿಲ್ಲಾಧಿಕಾರಿ(ಡಿಸಿ) ಸ್ವರೂಪ ಟಿಕೆ ಅವರು ಜಿಲ್ಲೆಯ ಎಲ್ಲಾ ಪ್ರವಾಸಿ ದೋಣಿ ನಿರ್ವಾಹಕರು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಮತ್ತು ವರ್ಧಿತ ಸುರಕ್ಷತಾ ಕ್ರಮಗಳ ಭಾಗವಾಗಿ 45 ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಮಂಗಳವಾರ ನಿರ್ದೇಶಿಸಿದ್ದಾರೆ.
ಇಂದು ಕರಾವಳಿ ಸುರಕ್ಷತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ, ಕಡಲತೀರಗಳು ಮತ್ತು ಕರಾವಳಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಯು ಮೊದಲ ಆದ್ಯತೆಯಾಗಿರಬೇಕು ಎಂದು ಒತ್ತಿ ಹೇಳಿದರು.
"ಜಿಲ್ಲೆಯ ನೈಸರ್ಗಿಕ ಸೌಂದರ್ಯವನ್ನು ಪ್ರವಾಸಿಗರು ಆನಂದಿಸುವಾಗ ಯಾವುದೇ ಜೀವಹಾನಿ ಸಂಭವಿಸದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿಗೆ ತರಬೇಕು" ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪೊಲೀಸ್, ಬಂದರು ಇಲಾಖೆ, ಕರಾವಳಿ ಕಾವಲು ಪಡೆ, ಸ್ಥಳೀಯ ಅಧಿಕಾರಿಗಳು ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಸರಿಯಾದ ಅನುಮತಿ ಹೊಂದಿರುವ ದೋಣಿಗಳನ್ನು ಮಾತ್ರ ಕಾರ್ಯನಿರ್ವಹಿಸಲು ಅನುಮತಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಪರವಾನಗಿ ಪಡೆದ ದೋಣಿಗಳು ವಾರ್ಷಿಕವಾಗಿ ತಮ್ಮ ಪರವಾನಗಿಗಳನ್ನು ನವೀಕರಿಸಬೇಕು ಮತ್ತು ಅನುಮತಿಯಿಲ್ಲದೆ ದೋಣಿಗಳನ್ನು ನಡೆಸುವ ನಿರ್ವಾಹಕರು ಪ್ರಯಾಣಿಕರನ್ನು ಸಾಗಿಸುವುದನ್ನು ನಿರ್ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಯಾಣಿಕರ ಸುರಕ್ಷತೆಯನ್ನು ಎತ್ತಿ ತೋರಿಸುತ್ತಾ, ಎಲ್ಲಾ ಪ್ರವಾಸಿಗರು ಹತ್ತುವ ಮೊದಲು ಲೈಫ್ ಜಾಕೆಟ್‌ಗಳನ್ನು ಧರಿಸಬೇಕು ಮತ್ತು ಲೈಫ್ ಜಾಕೆಟ್ ಧರಿಸುವ ಬಗ್ಗೆ ರೆಕಾರ್ಡ್ ಮಾಡಿದ ಆಡಿಯೊ ಪ್ರಕಟಣೆಗಳನ್ನು ಪ್ರತಿ ದೋಣಿಯಲ್ಲಿ ಪ್ಲೇ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶಿಸಿದರು.
ಸಭೆಯಲ್ಲಿ ಉಡುಪಿ ಎಸ್ಪಿ ಹರಿರಾಮ್ ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಬಿದ್ ಗದ್ಯಲ್ ಮತ್ತು ಪ್ರವಾಸೋದ್ಯಮ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್ಎಂ ಸೇರಿದಂತೆ ಇತರ ಅಧಿಕಾರಿಗಳು ಭಾಗವಹಿಸಿದ್ದರು.
ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ
ಕೋಡಿ ಬೆಂಗ್ರೆ ಡೆಲ್ಟಾ ಬೀಚ್ ಬಳಿ ಸೋಮವಾರ ಪ್ರವಾಸಿ ದೋಣಿ ಮುಳುಗಿ ಇಬ್ಬರು ಪ್ರವಾಸಿಗರು ಸಾವನ್ನಪ್ಪಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ದೀಶಾ(26) ಎಂಬ ವಿದ್ಯಾರ್ಥಿನಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.