ಮನ್ರೇಗಾ ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಇಂದು ಕಾಂಗ್ರೆಸ್ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ಭಾಗವಾಗಿ ಲೋಕ ಭವನದ ಕಡೆಗೆ ಮೆರವಣಿಗೆ ನಡೆಸಲು ನಿರ್ಧರಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ಪಕ್ಷದ ಶಾಸಕರು ಮತ್ತು ಸಂಸದರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದು ಬಿಡುಗಡೆ ಮಾಡಿದರು. ಬಳಿಕ ಲೋಕಭವನಕ್ಕೆ ತೆರಳಿದ ಕಾಂಗ್ರೆಸ್ ನಾಯಕರು ಮನ್ರೇಗಾ ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದರು. ಬಡವರು, ದಲಿತರು ಮತ್ತು ರೈತರ ಪರ ನಿಜವಾಗಿ ಹೋರಾಟ ಮಾಡುವ ಪಕ್ಷ ಕಾಂಗ್ರೆಸ್ ಮಾತ್ರ. ಬಡವರ ಕಾರ್ಯಕ್ರಮಗಳನ್ನು ಬಿಜೆಪಿಯವರು ರದ್ದು ಮಾಡಿದ್ದು, ಇದಕ್ಕೆ ಆರ್‌ಎಸ್‌ಎಸ್ ಮಾರ್ಗದರ್ಶನ ನೀಡುತ್ತಿದೆ ಎಂದು ಸಿಎಂ ಆರೋಪಿಸಿದರು. ಮಹಾತ್ಮ ಗಾಂಧೀಜಿ ಹೆಸರನ್ನು ಶಾಶ್ವತಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನಾಮಕರಣ ಮಾಡುವ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯ ಸರ್ಕಾರ ಕೈಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯ ವಿಧಾನಸಭೆಯ ಜಂಟಿ ಅಧಿವೇಶನದ ಸಂದರ್ಭದಲ್ಲಿ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು 'ಅವಮಾನಿಸಿದ ಮತ್ತು ಅಗೌರವಿಸಿದ' ಆರೋಪದ ಮೇಲೆ ಕೆಲವು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಮಂಗಳವಾರ ವಿಧಾನಸೌಧದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದವು. ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ನ್ಯಾಯಕ್ಕಾಗಿ ಒತ್ತಾಯಿಸಿದರು. ಇದೇ ವೇಳೆ ಅಬಕಾರಿ ಇಲಾಖೆಯ ಹಗರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಸಚಿವ ಆರ್‌ಬಿ ತಿಮ್ಮಾಪುರ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ ಅವರು, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವೈಫಲ್ಯಗಳು ಮತ್ತು ಮಹಿಳೆಯರಿಗೆ ಅಸಮರ್ಪಕ ಭದ್ರತೆ ಕುರಿತು ರಾಜ್ಯ ಸರ್ಕಾರವನ್ನು ದೂಷಿಸಿದರು. ವಿಧಾನಸಭೆ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ ಮತ್ತು ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಜೆಪಿ ಎಂಎಲ್‌ಸಿ ಸಿಟಿ ರವಿ, ಜೆಡಿಎಸ್ ಮತ್ತು ಬಿಜೆಪಿ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಗೌಡಗೆ ಬೆದರಿಕೆ ಹಾಕಿ ಪರಾರಿಯಾಗಿದ್ದ ಕಾಂಗ್ರೆಸ್ ನಾಯಕ ರಾಜೀವ್ ಗೌಡನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೇರಳದ ಗಡಿ ಭಾಗದಲ್ಲಿ ರಾಜೀವ್ ಗೌಡನನ್ನು ಬಂಧನ ಮಾಡಲಾಗಿದೆ. ಪ್ರಕರಣದಲ್ಲಿ ಬಂಧನ ಮಾಡದಂತೆ ರಾಜೀವ್ ಗೌಡ ಜಾಮೀನು ಅರ್ಜಿ ಸಲ್ಲಿಸಿದ್ದ. ಕೋರ್ಟ್ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಬಂಧಿತನನ್ನು ಕೋರ್ಟ್ ಗೆ ಹಾಜರುಪಡಿಸಲಾಗಿದೆ. ಸಚಿವ ಜಮೀರ್ ಪುತ್ರ ಝೈದ್ ಖಾನ್ ನಟನೆಯ ‘ಕಲ್ಟ್’ ಸಿನಿಮಾ ಫ್ಲೆಕ್ಸ್ ತೆರವುಗೊಳಿಸಿದ್ದಕ್ಕೆ ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತ ಗೌಡಗೆ ರಾಜೀವ್ ಗೌಡ ಧಮ್ಕಿ ಹಾಕಿದ್ದ.
ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಈಗಾಗಲೇ ನೆರೆಯ ತಮಿಳುನಾಡಿಗೆ ಭಾರಿ ಮಳೆ ಎಚ್ಚರಿಕೆ ನೀಡಿದ್ದ ಹವಾಮಾನ ಇಲಾಖೆ ಇದೀಗ ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ ಎಂದು ಮಾಹಿತಿ ನೀಡಿದೆ. ರಾಜ್ಯದ ಹವಾಮಾನದಲ್ಲಿ ಪ್ರತಿದಿನವೂ ಏರುಪೇರು ಉಂಟಾಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಚಳಿಯ ತೀವ್ರ ಕಡಿಮೆಯಾಗುತ್ತಿದೆ ಎನ್ನುವಾಗಲೇ ಮತ್ತೆ ರಾಜ್ಯದಲ್ಲಿ ಚಳಿ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದರ ಜೊತೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ನಿನ್ನೆ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಚದುರಿದಂತೆ ಮಳೆಯಾಗಿದೆ.