ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ಪತ್ತೆ ಮಾಡಿ, ಗಡಿಪಾರು ಮಾಡಲು ವಿಶೇಷ ತಂಡ ರಚನೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಗುರುವಾರ ಹೇಳಿದೆ.
ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಉಚ್ಛಾಟಿತ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ ನೆಲೆಸಿರುವ ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿಯನ್ನು ನೀಡಿದ್ದ ಹಿಂದುತ್ವ ಕಾರ್ಯಕರ್ತರಿಗೆ ಪೊಲೀಸರಿಂದ ಕಿರುಕುಳ ಉಂಟಾಗುತ್ತಿರುವ ಕುರಿತು ಗಮನ ಸೆಳೆದ ಸೂಚನೆಗೆ ಗೃಹ ಸಚಿವರ ಪರವಾಗಿ ಸಾರಿಗೆ ಹಾಗೂ ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಉತ್ತರಿಸಿದರು.
ಅಕ್ರಮ ವಲಸಿಗರ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ ಹಿಂದೂ ಪರ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಕಿರುಕುಳ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 370 ಅಕ್ರಮ ವಲಸಿಗರಿದ್ದು, ಅವರಲ್ಲಿ 213 ಜನರನ್ನು ಗಡೀಪಾರು ಮಾಡಲಾಗಿದೆ. ಇನ್ನುಳಿದ 157 ಮಂದಿಯ ವಿರುದ್ಧ ಅಕ್ರಮ ವಲಸಿಗರ ಬಂಧನ ಕೇಂದ್ರ(ಎಫ್.ಡಿ.ಸಿ)ದಲ್ಲಿನ ಪ್ರಕರಣಗಳಿರುವುದರಿಂದ, ಅವರನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ 25 ಲಕ್ಷಕ್ಕಿಂತ ಹೆಚ್ಚು ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದು, ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಕಾಫಿ ತೋಟ, ಶಾಪಿಂಗ್ ಮಾಲ್‍ಗಳು, ಐಟಿ ಬಿಟಿ ಕಂಪೆನಿಗಳಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ನಕಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಇದೊಂದು ದೊಡ್ಡ ಜಾಲ. ಇದಕ್ಕೆ ಕಡಿವಾಣ ಹಾಕದಿದ್ದರೆ, ಭಯಾನಕ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆಯಿದೆ. 25 ಲಕ್ಷ ಜನ ಬಾಂಗ್ಲಾದೇಶಿಯರು ರಾಜ್ಯದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಈಶಾನ್ಯ ರಾಜ್ಯಗಳು, ಪಶ್ಚಿಮ ಬಂಗಾಳ, ಬಿಹಾರ, ರಾಜಸ್ಥಾನ, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ರಾಜ್ಯಗಳ ಲಕ್ಷಾಂತರ ಜನ ಇಲ್ಲಿದ್ದಾರೆ. ಈ ಹಿಂದೆಯೂ ಬಾಂಗ್ಲಾದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಾವು ವಿಶೇಷ ತಂಡ ರಚನೆ ಮಾಡಿ, ಹಾಸನ, ಚಿಕ್ಕಮಗಳೂರು, ಕೊಡಗು ಸೇರಿದಂತೆ ಇತರೆಡೆ ಕಾಫಿ ಎಸ್ಟೇಟ್‍ಗಳಲ್ಲಿ ಪರಿಶೀಲನೆ ಮಾಡಿದ್ದೆವು ಎಂದು ಹೇಳಿದರು.
ಅಕ್ರಮ ವಲಸಿಗರು ಎಲ್ಲಿಯೇ ಇದ್ದರೂ ಅವರನ್ನು ಪತ್ತೆ ಮಾಡಿ ಹೊರಗೆ ಹಾಕುತ್ತೇವೆ. ಬಾಂಗ್ಲಾದೇಶದವರು ನಮ್ಮ ರಾಜ್ಯಕ್ಕೆ ಎಲ್ಲಿಂದ ಬರುತ್ತಾರೆ. ಬಾಂಗ್ಲಾದೇಶದ ಗಡಿಯನ್ನು ಹಂಚಿಕೊಂಡಿರುವ ರಾಜ್ಯಗಳ ಮೂಲಕವೇ ತಾನೇ ಅವರು ಬರುವುದು. ಇದು ನಮ್ಮ ಸರಕಾರದ ವೈಫಲ್ಯವಲ್ಲ, ಅಕ್ರಮವಾಗಿ ನಮ್ಮ ದೇಶದ ಗಡಿಯೊಳಗೆ ನುಸುಳುವುದನ್ನು ತಡೆಯದಿರುವ ಕೇಂದ್ರ ಸರಕಾರದ ವೈಫಲ್ಯ ಎಂದು ತಿಳಿಸಿದರು.
ಅಕ್ರಮವಾಗಿ ನೆಲೆಸಿರುವವರ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡಬೇಕು. ಅವರಿಗೆ ತೊಂದರೆ ಕೊಡಬಾರದು ಎಂದು ಯತ್ನಾಳ್ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಅಕ್ರಮ ವಲಸಿಗರನ್ನಷ್ಟೇ ಅಲ್ಲ, ಅವರನ್ನು ದೇಶದ ಗಡಿಯೊಳಗೆ ಕರೆದುಕೊಂಡು ಬರುವಂತಹ, ಅವರಿಗೆ ನಕಲಿ ದಾಖಲೆಗಳನ್ನು ಸೃಷ್ಠಿ ಮಾಡಿ ನೀಡುವ ದಲ್ಲಾಳಿಗಳನ್ನು ಒದ್ದು ಒಳಗೆ ಹಾಕುತ್ತೇವೆ. ಅಕ್ರಮವಾಗಿ ನೆಲೆಸಿರುವವರ ಬಗ್ಗೆ ಮಾಹಿತಿ ನೀಡುವವರನ್ನು ರಕ್ಷಿಸುತ್ತೇವೆ. ಆದರೆ, ಅವರು ಕಾನೂನು ಕೈಗೆ ತೆಗೆದುಕೊಳ್ಳಬಾರದು ಎಂದು ಹೇಳಿದರು.