ಬೆಂಗಳೂರು: ಭೂತದ ಬಾಯಲ್ಲಿ ಭಗವದ್ಗೀತೆ ಕೇಳುವುದು ಒಂದೇ, ಬಿಜೆಪಿಯವರಿಂದ ಘನತೆ, ಗೌರವ ಸಂಸ್ಕೃತಿಯ ಬಿಟ್ಟಿ ಪಾಠ ಕೇಳುವುದು ಒಂದೇ. ಸದನಗಳ ಘನತೆ, ಗೌರವವನ್ನು ಮೂರಾಬಟ್ಟೆ ಮಾಡಿರುವ ಬಿಜೆಪಿ ನೈತಿಕತೆಯ ಪಾಠ ಮಾಡುವುದು ಹೇಸಿಗೆತನದ ಪರಮಾವಧಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಚಿಂತಕರ ಚಾವಡಿಯಲ್ಲಿ ಬಾಯ್ತುರಿಕೆಗೆ ಮಾತಾಡುವ ನಾಯಕರನ್ನೇ ಆಯ್ಕೆ ಮಾಡುವ ಪರಂಪರೆ ಹೊಂದಿರುವ ಬಿಜೆಪಿ ಪಕ್ಷದವರು ಸದನದಲ್ಲಾಗಲಿ, ಸಾರ್ವಜನಿಕ ವೇದಿಕೆಯಲ್ಲಾಗಲಿ ಮಹಿಳೆಯರ ಬಗ್ಗೆ, ಜನಪ್ರತಿನಿಧಿಗಳ ಬಗ್ಗೆ ಉದುರಿಸುವ ಒಂದೊಂದು ಮುತ್ತುಗಳನ್ನು ನೋಡಿ ಜನ ಸಾಮಾನ್ಯರು ಹಾದಿ ಬೀದಿಯಲ್ಲಿ ಉಗಿಯುತ್ತಿರುವುದನ್ನು ಮರೆತಂತಿದೆ.
ಆರ್.ಎಸ್.ಎಸ್ ಹಾಗೂ ಬಿಜೆಪಿ ಇತ್ತೀಚಿಗೆ "ನಮಸ್ತೆ ಸದಾ ವತ್ಸಲೇ"ಯನ್ನು ಮರೆತು, "ನಮಸ್ತೆ ಸದಾ ರೌಡಿ ಕೋತ್ವಾಲನೇ"ಎಂದು ಶುರು ಮಾಡಿದ್ದಾರೆ. ಕೇಂದ್ರದ ಗೃಹ ಸಚಿವನೇ ಕೊಲೆಯ ಕೇಸ್ ಹಾಕಿಸಿಕೊಂಡು, ಗೂಂಡಾಗಿರಿ ಮಾಡಿ, ಸುಪ್ರೀಂ ಕೋರ್ಟಿನಿಂದ ಗಡಿಪಾರಾದವನ ಚೇಲಾಗಳೇ ತುಂಬಿ ತುಳುಕುತ್ತಿರುವ ಬಿಜೆಪಿಗೆ ರೌಡಿ ಕೋತ್ವಾಲನೇ ಗುರು. ರೌಡಿಗಳು, ರೇಪಿಸ್ಟ್ ಗಳು, ಕೊಲೆ ಗಡುಕರಿಗಾಗಿಯೇ ಬಿಜೆಪಿಯಲ್ಲಿ ಪ್ರತ್ಯೇಕ ಮೋರ್ಚಾ ಇರುವಾಗ ರೌಡಿ ಕೋತ್ವಾಲನ ಜಪ ಇಲ್ಲದೇ ನಿದ್ದೆ ಕೂಡ ಬರುವುದಿಲ್ಲ.
ಸದನದಲ್ಲೇ ಸರ್ಕಾರದ ಸಚಿವೆಯನ್ನು "ವೇಶ್ಯೆ" ಎಂದು ಕರೆದವನನ್ನು ಚಿಂತಕರ ಚಾವಡಿಗೆ ಸದಸ್ಯ ಮಾಡಿರುವ ಬಿಜೆಪಿಯ ಸಂಸ್ಕೃತಿ ಯಾವುದು? ಮಹಿಳೆಯರನ್ನು ತುಚ್ಛವಾಗಿ ಮಾತಾಡುವ ನಾಯಕನನ್ನು ಬಿಜೆಪಿ ಪಕ್ಷ ಮುಂಬಾಗಿಲಿನಿಂದ ಆಯ್ಕೆ ಮಾಡಿದ್ದಿರೋ ಇಲ್ಲ, ಹಿಂಬಾಗಿಲಿನಿಂದ ಆಯ್ಕೆ ಮಾಡಿದ್ದಿರೋ ಎಂದು ಪ್ರಶ್ನಿಸಿದ್ದಾರೆ.
ರಾತ್ರಿ ಸರ್ಕಾರದ ಕೆಲಸ, ದಿನವಿಡೀ ಮುಖ್ಯಮಂತ್ರಿಯ ಕೆಲಸ ಮಾಡುತ್ತಾರೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನೇ ಬಹಿರಂಗ ಸಭೆಯಲ್ಲಿ ನಿರ್ಲಜ್ಜೆಯಿಂದ ಮಾತಾಡಿದ ರವಿ ಕುಮಾರ್ ನನ್ನು ಯಾವ ಮಾನದಂಡದ ಮೇಲೆ ಚಿಂತಕರ ಚಾವಡಿಗೆ ಹಿಂಬಾಗಿಲಿಂದ ಆಯ್ಕೆ ಮಾಡಿದ್ದೀರಿ? ಸಂಘ ಪರಿವಾರದ ಸಂಸ್ಕೃತಿಯ ವಾರಸುದಾರನ ನುಡಿಮುತ್ತುಗಳಿಂದ ಚಿಂತಕ ಚಾವಡಿಯೇ ಎಗರಿ ಹೋಗಿದೆ ಎಂದು ಲೇವಡಿ ಮಾಡಿದ್ದಾರೆ.
ಮನೆಗ ಕಷ್ಟ ಎಂದು ಬಂದ ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಮಾಡಿ, ಪೋಕ್ಸ್ ಕೇಸ್ ಅಲ್ಲಿ ಕೋರ್ಟ್ ಎದುರು ಹಾಜರಾಗದೆ ಸಾರ್ವಜನಿಕವಾಗಿ ಮುಖ ತೋರಿಸಲು ಯೋಗ್ಯತೆ ಇಲ್ಲದ ನಾಯಕನನ್ನು ಮಾರ್ಗದರ್ಶಕ ಮಂಡಳಿಯಲ್ಲಿ ಇಟ್ಟುಕೊಂಡಿರುವ ಬಿಜೆಪಿ ಪಕ್ಷಕ್ಕೆ ಕಿಂಚಿತ್ತಿದ್ದಾರೂ ನಾಚಿಕೆ, ಮಾನ, ಮರ್ಯಾದೆ ಎನ್ನುವುದು ಇದೆಯೇ? ಎಂದು ಹರಿಪ್ರಸಾದ್ ತಪರಾಕಿ ಹಾಕಿದ್ದಾರೆ.
ಬಿಜೆಪಿಯ ಇಂದ್ರ-ಚಂದ್ರ-ಸತ್ಯಹರಿಶ್ಚಂದ್ರನ ತುಂಡುಗಳ ಬಗ್ಗೆ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲೇ ಮಾಡಿರುವ ಮಾನಗೇಡಿತನಗಳನ್ನು ಕಂತುಗಳಲ್ಲಿ ಮಾತಾಡುವಷ್ಟಿದೆ. ಬಿಜೆಪಿಯ ಗೊಡ್ಡು ಬೆದರಿಕೆಗಳಿಗೆ, ಅವಮಾನಗಳಿಗೆ ಹೆದರುವ, ಬಗ್ಗುವ ಹೇಡಿ ನಾನಲ್ಲ. ನನ್ನದು ಗಾಂಧಿ ಸಂತತಿ- ಹೇಡಿ ಸಾವರ್ಕರ್ ಸಂತತಿಯಂತೂ ಅಲ್ಲವೇ ಅಲ್ಲ.