ರಾಮನಗರ: ಕಲ್ಲು ಕ್ವಾರಿಯಲ್ಲಿ ಬಂಡೆ ಕುಸಿದು ಬಿಹಾರ ಮೂಲದ 7 ಮಂದಿ ಕಾರ್ಮಿಕರು ಸಾವಿಗೀಡಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಮಾದಾಪಟ್ಟಣ ಬಳಿ ಇಂದು ನಸುಕಿನ ಜಾವ ನಡೆದಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾವೇರಿ ಕ್ರಷರ್ನಲ್ಲಿ ನಡೆದಿದೆ.
ಬಂಡೆ ಕೆಳಗೆ ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ದೌಡಾಯಿಸಿದ್ದಾರೆ.
ಮೇಲಿಂದ ಕುಸಿದ ಬಂಡೆ
ಮೇಲಿಂದ ಬಂಡೆ ಬಿದ್ದು ಏಳು ಮಂದಿ ಕಾರ್ಮಿಕರು ಮೃತಪಟ್ಟು, ಬಂಡೆ ಕೆಳಗೆ ಇನ್ನು ಹಲವು ಕಾರ್ಮಿಕರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ತಾವರೆಕರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಪಟ್ಟಣ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಕಾವೇರಿ ಕಂಪನಿಗೆ ಸೇರಿದ ಕ್ರಷರ್
ಕಾವೇರಿ ಕಂಪನಿಗೆ ಸೇರಿದ ಕ್ರಷರ್ನಲ್ಲಿ ದುರಂತ ಸಂಭವಿಸಿದ್ದು, ಇಂದು ಬೆಳಗ್ಗೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಎಂದಿನಂತೆ ಕೆಲಸ ಮಾಡುತ್ತಿದ್ದ ಕಾರ್ಮಿಕರ ಪಾಲಿಗೆ ಬಂಡೆ ಯಮನಾಗಿ ಬಂದಿದೆ. ಇಟಾಚಿಯಲ್ಲಿ ಕೆಲಸ ಮಾಡುವಾಗ ಕಾರ್ಮಿಕರ ಮೇಲೆಯೇ ಬಿದ್ದು ಭಾರೀ ದುರಂತ ಸಂಭವಿಸಿದೆ. ಸ್ಥಳಕ್ಕೆ ತಾವರೆಕೆರೆ ಪೊಲೀಸ್ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಮುಂಜಾನೆ ಜಿಲೆಟಿನ್ ಸ್ಫೋಟ!
ಸ್ಥಳೀಯ ಮೂಲಗಳ ಪ್ರಕಾರ, ಹುಲವೇನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಕದ್ದುಮುಚ್ಚಿ ಅಕ್ರಮ ಗಣಿಗಾರಿಕೆ ನಡೆಸಲಾಗುತ್ತಿತ್ತು. ಇಂದು ಬೆಳಗಿನ ಜಾವ ಕಾರ್ಮಿಕರು ಎಂದಿನಂತೆ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ, ದೊಡ್ಡ ಬಂಡೆಗಳನ್ನು ಪುಡಿ ಮಾಡಲು ಅತಿಯಾದ ತೀವ್ರತೆಯ ಸ್ಫೋಟಕಗಳನ್ನು ಬಳಸಲಾಗಿದೆ.
ಈ ವೇಳೆ ಸುರಕ್ಷತಾ ಕ್ರಮಗಳನ್ನು ಗಾಳಿಗೆ ತೂರಿ ಬಂಡೆ ಸ್ಫೋಟಿಸುವಾಗ ಇಡೀ ಪ್ರದೇಶವೇ ಬಹುದೊಡ್ಡ ಸೌಂಡ್ ಜೊತೆಗೆ ಸಿಡಿದಿದೆ. ಸ್ಫೋಟದ ತೀವ್ರತೆಗೆ ಬಂಡೆ ಕುಸಿದು ಸಿಲುಕಿ ಏಳು ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದ್ದು, ಮೃತರ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ.