ಹೈಕೋರ್ಟ್  
ರಾಜ್ಯ

ಮಗಳು ಮೇಜರ್ ಆದರೂ ಶಿಕ್ಷಣದ ಹೊಣೆ ತಂದೆಯದ್ದೇ; ಉನ್ನತ ಶಿಕ್ಷಣದ ವೆಚ್ಚ ಭರಿಸಬೇಕು: High court

2026ರ ಏಪ್ರಿಲ್ 28ರಂದು ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಷನ್ಸ್ ನ್ಯಾಯಾಲಯವು 2026ರ ಫೆಬ್ರವರಿ 3ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿತ್ತು.

ಬೆಂಗಳೂರು: ಮಗಳಿಗೆ 18 ವರ್ಷ ತುಂಬಿದ ತಕ್ಷಣ ತಂದೆಯ ಜವಾಬ್ದಾರಿ ಮುಗಿಯುವುದಿಲ್ಲ. ಪ್ರಾಪ್ತವಯಸ್ಕಳಾಗಿರುವ ಅವಿವಾಹಿತ ಮಗಳ ಉನ್ನತ ಶಿಕ್ಷಣದ ವೆಚ್ಚವನ್ನು ಭರಿಸುವುದು ತಂದೆಯ ಕಾನೂನುಬದ್ಧ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಚರ್ಮರೋಗ ಶಾಸ್ತ್ರದಲ್ಲಿ (ಎಂಡಿ ಡರ್ಮಟಾಲಜಿ) ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ₹16 ಲಕ್ಷ ಶುಲ್ಕ ಪಾವತಿಸುವಂತೆ ತಂದೆಗೆ ನೀಡಿದ್ದ ಕೆಳ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.

ಈ ಸಂಬಂಧ ಮಂಗಳೂರಿನ ನಿವಾಸಿಯಾಗಿರುವ ತಂದೆ ಸಲ್ಲಿಸಿದ್ದ ಕ್ರಿಮಿನಲ್ ರಿವಿಷನ್ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ವಜಾಗೊಳಿಸಿದರು.

2026ರ ಏಪ್ರಿಲ್ 28ರಂದು ಸೆಷನ್ಸ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸೆಷನ್ಸ್ ನ್ಯಾಯಾಲಯವು 2026ರ ಫೆಬ್ರವರಿ 3ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿತ್ತು.

ಮಗಳು ಪ್ರಾಪ್ತವಯಸ್ಕಳಾದ ಬಳಿಕ ಆಕೆಯ ಶಿಕ್ಷಣದ ವೆಚ್ಚ ಭರಿಸುವ ಹೊಣೆಗಾರಿಕೆ ನನ್ನದಲ್ಲ ಎಂದು ತಂದೆ ವಾದಿಸಿದ್ದರು. ಆದರೆ, ಈ ವಾದವನ್ನು ಹೈಕೋರ್ಟ್ ತಳ್ಳಿಹಾಕಿತು.

ಮಗಳು ಎಂಬಿಬಿಎಸ್‌ಗೆ ಸೇರ್ಪಡೆಯಾಗುವ ವೇಳೆ ತಂದೆ-ತಾಯಿ ಇಬ್ಬರ ಸಹಮತವೂ ಇತ್ತು. ತಂದೆಯೂ ಆಕೆಯ ವೈದ್ಯಕೀಯ ಶಿಕ್ಷಣದ ಪ್ರವೇಶ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಹೀಗಿರುವಾಗ, ಈಗ ಸ್ನಾತಕೋತ್ತರ ಶಿಕ್ಷಣದ ಶುಲ್ಕವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಹೇಳಲು ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ.

ತಂದೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುತ್ತಿರುವ ಉದ್ಯಮಿಯಾಗಿದ್ದು, ಅಗತ್ಯವಿದ್ದರೆ ಸಾಲ ಪಡೆದು ನಂತರ ತಮ್ಮ ವ್ಯವಹಾರದ ಮೂಲಕ ಅದನ್ನು ಮರುಪಾವತಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಮಗಳು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾಗಲೇ ತಂದೆ-ತಾಯಿ ನಡುವೆ ವೈವಾಹಿಕ ಕಲಹ ಉಂಟಾಗಿತ್ತು. ನಂತರ ನೀಟ್ ಪರೀಕ್ಷೆಯ ಮೂಲಕ ಮಂಗಳೂರಿನ ಕಾಲೇಜಿನಲ್ಲಿ ಎಂಡಿ ಡರ್ಮಟಾಲಜಿ ಕೋರ್ಸ್‌ಗೆ ಪ್ರವೇಶ ಪಡೆದಿದ್ದ ಮಗಳು, ಮೊದಲ ವರ್ಷದ ಕಾಲೇಜು ಶುಲ್ಕ ರೂ.16 ಲಕ್ಷವನ್ನು ತಂದೆಯಿಂದ ಪಾವತಿಸುವಂತೆ ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ತಂದೆಯ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ, ಮಹಿಳೆಯರನ್ನು ಗೃಹ ಹಿಂಸೆಯಿಂದ ರಕ್ಷಿಸುವ ಕಾಯ್ದೆ-2005ರ (Protection of Women from Domestic Violence Act, 2005) ಸೆಕ್ಷನ್ 20(d) ಅಡಿಯಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ರೂ.16 ಲಕ್ಷ ಪಾವತಿಸುವಂತೆ ಆದೇಶಿಸಿತ್ತು. ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯವೂ ಎತ್ತಿಹಿಡಿದಿತ್ತು. ಬಳಿಕ ತಂದೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಪ್ರಾಪ್ತವಯಸ್ಕ ಅವಿವಾಹಿತ ಮಗಳು ಸ್ನಾತಕೋತ್ತರ ಶಿಕ್ಷಣಕ್ಕಾಗಿ ಗೃಹ ಹಿಂಸೆ ಕಾಯ್ದೆಯ ಸೆಕ್ಷನ್ 20ರಡಿ ಆರ್ಥಿಕ ನೆರವು ಕೇಳಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಹೈಕೋರ್ಟ್, ಈ ಸೆಕ್ಷನ್ ನಿರ್ವಹಣಾ ವೆಚ್ಚದ ಜೊತೆಗೆ ಆರ್ಥಿಕ ಪರಿಹಾರ ನೀಡಲು ಅವಕಾಶ ಕಲ್ಪಿಸುತ್ತದೆ ಎಂದು ತಿಳಿಸಿದೆ.

ಅವಿವಾಹಿತ ಮಗಳ ಪದವಿ ಅಥವಾ ಸ್ನಾತಕೋತ್ತರ ಶಿಕ್ಷಣದ ವೆಚ್ಚವನ್ನು ಭರಿಸುವುದು ತಂದೆಯ ಕರ್ತವ್ಯವಾಗಿದ್ದು, ಅದು ಕೇವಲ ನಿರ್ವಹಣಾ ವೆಚ್ಚಕ್ಕೆ ಸೀಮಿತವಲ್ಲ ಎಂದು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!